
ಉಡುಪಿ: ಬುಧವಾರ ಕಾರ್ಕಳದ ಯಕ್ಷ ರಂಗಾಯಣ ಸಭಾಂಗಣದಲ್ಲಿ ನಡೆದ ಬಾಲಲೀಲೆ ಮಕ್ಕಳ ರಂಗ ಶಿಬಿರವನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು. ಈ ಶಿಬಿರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷ ರಂಗಾಯಣ ಕಾರ್ಕಳದ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಸುನೀಲ್ ಕುಮಾರ್ ಅವರು, “ಶಿಬಿರಗಳಲ್ಲಿ ಭಾಗವಹಿಸುವಿಕೆ ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸಲು ನೆರವಾಗುತ್ತದೆ. ರಜಾ ದಿನಗಳನ್ನು ಟಿ.ವಿ ಮತ್ತು ಮೊಬೈಲ್ ಬಳಕೆಯಲ್ಲಿ ವ್ಯರ್ಥ ಮಾಡದೇ, ಶಿಬಿರದಿಂದ ಸಂಪೂರ್ಣ ಲಾಭ ಪಡೆಯಬೇಕು,” ಹಾಗೆಯೇ
“ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಅದರ ವೈವಿಧ್ಯಮಯ ರೂಪಗಳಿಗೆ ಹೊಸ ಸ್ಪರ್ಶ ನೀಡುವ ಕಾರ್ಯ ರಂಗಾಯಣದ ಮೂಲಕ ಮುಂದುವರಿಯಬೇಕು,” ಎಂದು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಖ್ಯಾತ ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಅವರು, “ಯುವ ಮನಸ್ಸುಗಳು ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಕಾಣಬೇಕು. ಶಿಬಿರಗಳಂತಹ ವೇದಿಕೆಗಳು ಆ ಕನಸುಗಳಿಗೆ ಮಾರ್ಗದರ್ಶನ ನೀಡುತ್ತವೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಕ್ಷ ರಂಗಾಯಣ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ ಮಾತನಾಡಿ, “ಪೋಷಕರು ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು,” ಎಂದು ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಸಂತ್ ನಿರೂಪಣೆ ನಡೆಸಿದರು ಮತ್ತು ವಂದಿಸಿದರು.