
ಕೊಪ್ಪ: ಕ್ಷುಲ್ಲಕ ಕಾರಣಕ್ಕಾಗಿ ತಾಯಿ ಬೈದಿದ್ದರಿಂದ ಬೇಸತ್ತ ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಸಂಭವಿಸಿದೆ.
ಘಟನೆಯ ವಿವರ:
ಮೃತ ಬಾಲಕಿಯನ್ನು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಪ್ರಿತಾ ಎಂದು ಗುರುತಿಸಲಾಗಿದೆ. ಮೃತಳ ತಾಯಿ ಸರೋಜಾ ಅವರು ಕೆಲಸದ ನಿಮಿತ್ತ ಹೊರಹೋಗಿದ್ದು, ಮಧ್ಯಾಹ್ನದ ಊಟದ ವಿರಾಮಕ್ಕೆ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಮಗಳು ಓದಿನ ಕಡೆ ಗಮನ ನೀಡದೆ ಸದಾ ಟಿವಿ ನೋಡುತ್ತಿರುವುದನ್ನು ಗಮನಿಸಿ ತಾಯಿ ಗದರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಊಟ ಮಾಡುವಾಗ ಅನ್ನ ಚೆಲ್ಲಿದ್ದಕ್ಕೆ ತಾಯಿ ಮಗಳನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಜಾಗವನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ. ತಾಯಿಯ ಮಾತಿನಿಂದ ತೀವ್ರವಾಗಿ ಮನನೊಂದ ಬಾಲಕಿ, ಅನ್ನವನ್ನು ಕ್ಲೀನ್ ಮಾಡಿದ ನಂತರ ಯಾರೊಂದಿಗೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾಳೆ.
ದುರಂತದ ಅಂತ್ಯ:
ತಾಯಿ ಪುನಃ ಕೆಲಸಕ್ಕೆ ತೆರಳಿದ ಕೆಲವೇ ಕ್ಷಣಗಳಲ್ಲಿ, ಬಾಲಕಿ ಸುಪ್ರಿತಾ ಮನೆಯ ಮೇಲ್ಛಾವಣಿಗೆ ತನ್ನ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿದು ತಾಯಿ ತಕ್ಷಣ ಮನೆಗೆ ಧಾವಿಸಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಕೌಟುಂಬಿಕ ಹಿನ್ನೆಲೆಯಲ್ಲಿ ಸರೋಜಾ ಅವರು ಪತಿಯಿಂದ ದೂರವಾಗಿದ್ದು, ಹಿರಿಯ ಮಗಳಾದ ಸುಪ್ರಿತಾ ತಾಯಿಯ ಜೊತೆ ವಾಸವಿದ್ದರೆ, ಕಿರಿಯ ಮಗಳು ತಂದೆಯ ಬಳಿ ಇದ್ದಳು ಎನ್ನಲಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



































