
ಚಿಕ್ಕಮಗಳೂರು: ಕೌಟುಂಬಿಕ ಕಲಹದ ತೀವ್ರ ಸ್ವರೂಪದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆಗೈದಿರುವ ಭೀಕರ ಘಟನೆ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಬುಧವಾರ (ಅ. 15) ನಡೆದಿದೆ.
ಗಂಡನಿಂದ ಭೀಕರವಾಗಿ ಕೊಲೆಯಾದ ಮಹಿಳೆಯನ್ನು ತನು (25) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿ ಪತಿಯ ಹೆಸರು ರಮೇಶ್.
ಏಳು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಆರು ವರ್ಷದ ಗಂಡು ಮಗನಿದ್ದಾನೆ. ಕೌಟುಂಬಿಕ ಜಗಳದಿಂದಾಗಿ ತನು ಅವರು ಕಳೆದ ಎರಡು ವರ್ಷಗಳಿಂದ ಪತಿಯಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.
ಬುಧವಾರ ರಾತ್ರಿ ಕುಡಿದ ಮತ್ತಿನಲ್ಲಿ ಪತಿ ರಮೇಶ್ ತನ್ನ ಪತ್ನಿಯ ಮನೆಗೆ ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ತೀವ್ರ ಜಗಳ ಉಂಟಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ರಮೇಶ್ ಮಾರಕಾಸ್ತ್ರದಿಂದ ಪತ್ನಿ ತನುವನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.