
ಉಡುಪಿ : ಪೊಲೀಸ್ ಇಲಾಖೆಯಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿ “ದಕ್ಷ ಅಧಿಕಾರಿ” ಎಂಬ ಗೌರವಕ್ಕೆ ಪಾತ್ರರಾಗಿರುವ ಸುರತ್ಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರು ಇದೀಗ ಮಣಿಪಾಲ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಅಧಿಕೃತವಾಗಿ ಹಾಜರಾಗಿದ್ದಾರೆ.
ಮೂಲತಃ ಪುತ್ತೂರು ಮೂಲದವರಾಗಿರುವ ಮಹೇಶ್ ಪ್ರಸಾದ್ ಅವರು ತಮ್ಮ ಪೊಲೀಸ್ ಸೇವೆಯನ್ನು ಬಂಟ್ವಾಳ, ಹಿರಿಯಡ್ಕ, ಕೋಟ, ಶೃಂಗೇರಿ ಹಾಗೂ ಬೆಂಗಳೂರಿನ ಹಲವು ಠಾಣೆಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಬಳಿಕ ಸಿಸಿಬಿ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿ, ಐಸಿಸ್ ಉಗ್ರ ಸಂಘಟನೆಗೆ ಸಂಪರ್ಕ ಹೊಂದಿದ್ದವರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಗಮನಸೆಳೆದಿದ್ದರು.
ಇತ್ತೀಚೆಗಷ್ಟೇ ಮಂಗಳೂರಿನ ಕೋಟೆಕಾರ್ ಪ್ರದೇಶದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಯಶಸ್ವಿ ತನಿಖೆ ನಡೆಸಿದ ಕಾರಣ ಇವರಿಗೆ “ಮುಖ್ಯಮಂತ್ರಿ ಪದಕ” ಪ್ರಶಸ್ತಿ ನೀಡಲಾಗಿತ್ತು. ಈ ಸಾಧನೆಯಿಂದ ಇವರಿಗಿರುವ ಅಪಾರ ಕೌಶಲ್ಯ ಮತ್ತೊಮ್ಮೆ ಸಾಬೀತಾಯಿತು.
ಪ್ರಸ್ತುತ ಉಡುಪಿಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ನಿವಾಸಿಯಾಗಿರುವ ಮಹೇಶ್ ಪ್ರಸಾದ್ ಅವರು ಸುರತ್ಕಲ್ ಠಾಣೆಯಿಂದ ಬೀಳ್ಕೊಡಲಾದ ಸಂದರ್ಭದಲ್ಲಿ ಸಹೋದ್ಯೋಗಿಗಳು ಗೌರವಪೂರ್ವಕವಾಗಿ ಬೀಳ್ಕೊಟ್ಟು ಹರ್ಷಭಾವದಿಂದ ವಿದಾಯ ಹೇಳಿದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅವರು ಹೊಸ ಕರ್ತವ್ಯಕ್ಕೆ ಹಾಜರಾಗಿದ್ದು, ಸಾರ್ವಜನಿಕರ ಭದ್ರತೆಗಾಗಿ ತಮ್ಮ ಸೇವೆಯನ್ನು ಮುಂದುವರೆಸುತ್ತಿದ್ದಾರೆ.