
ಬೆಂಗಳೂರು: ನೀವು ಬ್ಯಾಂಕ್ ಸಾಲದ ಕಂತು (EMI) ಅಥವಾ ಯಾವುದೇ ವ್ಯವಹಾರಕ್ಕೆ ನೀಡಿದ ಚೆಕ್ ಬೌನ್ಸ್ ಆಗುತ್ತಿದೆಯೇ? ಹಾಗಿದ್ದರೆ ನೀವು ಕೇವಲ ಆರ್ಥಿಕ ನಷ್ಟ ಮಾತ್ರವಲ್ಲದೆ, ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗುತ್ತಿದ್ದರೂ, ಚೆಕ್ ಮತ್ತು ಆಟೋ-ಡೆಬಿಟ್ ವಿಫಲತೆಗಳು ಗ್ರಾಹಕರನ್ನು ಸಂಕಷ್ಟಕ್ಕೆ ದೂಡುತ್ತಿವೆ.
ಸೆಕ್ಷನ್ 138ರ ಅಡಿ ಕಠಿಣ ಕ್ರಮ
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ 138ನೇ ವಿಧಿಯಡಿ ಚೆಕ್ ಬೌನ್ಸ್ ಆಗುವುದು ಗಂಭೀರ ಅಪರಾಧವಾಗಿದೆ. ಯಾವುದೇ ವ್ಯಕ್ತಿ ನೀಡಿದ ಚೆಕ್ ಹಣವಿಲ್ಲದೆ ವಾಪಸ್ ಬಂದಾಗ, ಸಂಬಂಧಪಟ್ಟವರು ಕಾನೂನು ನೋಟಿಸ್ ಕಳುಹಿಸುತ್ತಾರೆ. ಈ ನೋಟಿಸ್ ತಲುಪಿದ 15 ದಿನಗಳ ಒಳಗಾಗಿ ಬಾಕಿ ಹಣ ಪಾವತಿಸದಿದ್ದರೆ, ನ್ಯಾಯಾಲಯವು ಗರಿಷ್ಠ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಚೆಕ್‌ನಲ್ಲಿರುವ ಮೊತ್ತದ 2 ಪಟ್ಟು ದಂಡ ವಿಧಿಸುವ ಅಧಿಕಾರ ಹೊಂದಿದೆ. ಕೆಲವು ಸಂದರ್ಭಗಳಲ್ಲಿ ಶಿಕ್ಷೆ ಮತ್ತು ದಂಡ ಎರಡನ್ನೂ ಅನುಭವಿಸಬೇಕಾಗಬಹುದು.
ಬ್ಯಾಂಕ್ ದಂಡಗಳ ಹೊರೆ
ಚೆಕ್ ಅಥವಾ ‘ನ್ಯಾಚ್’ (NACH) ಮೂಲಕ ನಡೆಯುವ ಎಸ್‌ಐಪಿ (SIP) ಪಾವತಿಗಳು ವಿಫಲವಾದ ತಕ್ಷಣ ಬ್ಯಾಂಕ್‌ಗಳು ದಂಡ ಪ್ರಕ್ರಿಯೆ ಆರಂಭಿಸುತ್ತವೆ. ಪ್ರತಿ ಬಾರಿ ಪಾವತಿ ವಿಫಲವಾದಾಗ ಕನಿಷ್ಠ 250 ರೂ. ನಿಂದ 750 ರೂ. ವರೆಗೆ ‘ಬೌನ್ಸ್ ಚಾರ್ಜ್’ ವಿಧಿಸಲಾಗುತ್ತದೆ. ಇದರ ಜೊತೆಗೆ ತಡವಾಗಿ ಪಾವತಿಸಿದ್ದಕ್ಕಾಗಿ ಹೆಚ್ಚುವರಿ ಬಡ್ಡಿ ಮತ್ತು ವಿಳಂಬ ಶುಲ್ಕಗಳು ಅನ್ವಯವಾಗುತ್ತವೆ. ನೀವು ಸತತವಾಗಿ ಮೂರು ಬಾರಿ ಪಾವತಿ ತಪ್ಪಿಸಿದರೆ, ಕಾನೂನು ಪ್ರಕ್ರಿಯೆ ಆರಂಭವಾಗುವ ಮೊದಲೇ ನೀವು ಸುಮಾರು 2,000 ದಿಂದ 3,000 ರೂ. ವರೆಗೆ ಕೇವಲ ದಂಡದ ರೂಪದಲ್ಲಿ ಕಳೆದುಕೊಳ್ಳಬೇಕಾಗುತ್ತದೆ.
ಸಿಬಿಲ್ ಸ್ಕೋರ್ ಮೇಲೆ ಗಂಭೀರ ಪರಿಣಾಮ
ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲದ ಕಂತು ಪಾವತಿಸದಿದ್ದರೆ, ಸಾಲ ನೀಡಿದ ಸಂಸ್ಥೆಗಳು ನಿಮ್ಮನ್ನು ‘ಡೀಫಾಲ್ಟರ್’ ಪಟ್ಟಿಗೆ ಸೇರಿಸುತ್ತವೆ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ (CIBIL Score) ತಕ್ಷಣವೇ 50 ರಿಂದ 70 ಅಂಕಗಳಷ್ಟು ಕುಸಿಯಬಹುದು. ಒಮ್ಮೆ ಸ್ಕೋರ್ ಕಡಿಮೆಯಾದರೆ ಭವಿಷ್ಯದಲ್ಲಿ ತುರ್ತು ಸಂದರ್ಭಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವುದು ಅಸಾಧ್ಯವಾಗಬಹುದು.
ಗಮನಿಸಬೇಕಾದ ಅಂಶಗಳು
- ಚೆಕ್ ಬೌನ್ಸ್ ಆಗುವುದು ಕ್ರಿಮಿನಲ್ ಅಪರಾಧವಾಗಿದ್ದರೆ, ಆಟೋ-ಡೆಬಿಟ್ (ECS) ವಿಫಲತೆಗಳು ಸಾಮಾನ್ಯವಾಗಿ ಸಿವಿಲ್ ಸ್ವರೂಪದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ.
- ಆದರೆ ಪದೇ ಪದೇ ಪಾವತಿ ವಿಫಲವಾಗುವುದು ನಿಮ್ಮ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ.
- ಹೀಗಾಗಿ, ಪ್ರತಿಯೊಬ್ಬ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ನಿಗದಿತ ಪಾವತಿ ದಿನಾಂಕದಂದು ಪರ್ಯಾಪ್ತ ಹಣ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ.




































