
ಹೊಸದಿಲ್ಲಿ: ವೈದ್ಯರಿಂದಲೂ ಪತ್ತೆ ಹಚ್ಚಲಾಗದ ವಿಚಿತ್ರ ಕಾಯಿಲೆಯೊಂದಕ್ಕೆ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ‘ಚಾಟ್‌ಜಿಪಿಟಿ’ ಕಾರಣವನ್ನು ಕಂಡುಹಿಡಿದು, ಮಹಿಳೆಯೊಬ್ಬರ ಜೀವವನ್ನು ಉಳಿಸಿದೆ ಎಂದು ಶ್ರೇಯಾ ಎಂಬವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಾದಿಸಿದ್ದಾರೆ.
ಶ್ರೇಯಾ ಅವರ ತಾಯಿ ಒಂದೂವರೆ ವರ್ಷದಿಂದ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದರು. ಇದರಿಂದ ಅವರ ಜೀವಕ್ಕೆ ಅಪಾಯವೂ ಇತ್ತು. ಹಲವು ವೈದ್ಯರನ್ನು ಸಂಪರ್ಕಿಸಿದರೂ, ರೋಗದ ಮೂಲ ಕಾರಣ ಏನೆಂದು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ನಿರಾಸೆಗೊಂಡ ಶ್ರೇಯಾ, ತಮ್ಮ ತಾಯಿಯ ರೋಗಲಕ್ಷಣಗಳ ವಿವರಗಳನ್ನು ಚಾಟ್‌ಜಿಪಿಟಿಗೆ ನೀಡಿದಾಗ, ಆ ಚಾಟ್‌ಬಾಟ್ ಅಚ್ಚರಿಯ ಮಾಹಿತಿಯನ್ನು ನೀಡಿದೆ. ಶ್ರೇಯಾ ಅವರ ತಾಯಿಯ ರಕ್ತದೊತ್ತಡದ ನಿರ್ದಿಷ್ಟ ಔಷಧಿಯಿಂದಲೇ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಚಾಟ್‌ಜಿಪಿಟಿ ತಿಳಿಸಿದೆ.
ಚಾಟ್‌ಜಿಪಿಟಿ ನೀಡಿದ ಮಾಹಿತಿ ಆಧಾರದ ಮೇಲೆ, ವೈದ್ಯರ ಸಲಹೆ ಪಡೆದು ಔಷಧವನ್ನು ಬದಲಾಯಿಸಿದಾಗ, ಶ್ರೇಯಾ ಅವರ ತಾಯಿಯ ಆರೋಗ್ಯ ಸುಧಾರಿಸಿದೆ ಎಂದು ಅವರು ಹಂಚಿಕೊಂಡಿದ್ದಾರೆ. ಈ ಘಟನೆಯು ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಮತ್ತು ಭವಿಷ್ಯದ ಬಗ್ಗೆ ಚರ್ಚೆಗೆ ಗ್ರಾಸ ಒದಗಿಸಿದೆ.