
ಬೆಂಗಳೂರು : ರಾಜ್ಯ ಸರ್ಕಾರದ ಜಾತಿಗಣತಿ ವರದಿ ರಾಜ್ಯ ರಾಜಕಾರಣದಲ್ಲಿ ಭಾರೀ ಭುಗಿಲೆದ್ದಿದೆ. ವಿವಿಧ ಸಮುದಾಯಗಳ ಆಕ್ರೋಶದ ನಡುವೆ, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಲಿಂಗಾಯತ ಸಮುದಾಯದ ಏಳು ಸಚಿವರು ರಾಜೀನಾಮೆ ನೀಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿಯು ರಾಜ್ಯ ರಾಜಕೀಯವನ್ನು ಹೆಚ್ಚು ಚುರುಕುಗೊಳಿಸಿದೆ.
ಜಾತಿಗಣತಿ ವರದಿಯಿಂದ ಲಿಂಗಾಯತ ಸಮುದಾಯಕ್ಕೆ ನ್ಯಾಯವಾಗಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಒಳಗೆಯೇ ಅಸಮಾಧಾನ ಎದ್ದಿದೆ. ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಪಕ್ಷದ ಲಿಂಗಾಯತ ಸಚಿವರ ವಿರುದ್ಧ ತೀವ್ರ ಆರೋಪ ಹೊರಿಸಿದ್ದಾರೆ.
“ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಕ್ಷಣವೇ ಸಭೆ ನಡೆಸಿದರೆ, ಲಿಂಗಾಯತ ಸಮುದಾಯದ ಯಾವುದೇ ಸಚಿವರು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಶ್ವರ ಖಂಡ್ರೆ ಅವರಿಗೆ ಕರೆ ಮಾಡಿದ್ದರೂ ಸ್ಪಂದನೆ ಬಂದಿಲ್ಲ. ನಮ್ಮ ಸಮುದಾಯದ ಶಾಸಕರು ಕೂಡಲೇ ಸಭೆ ಕರೆದು ಹೋರಾಟ ಆರಂಭಿಸಬೇಕಿತ್ತು,” ಎಂದು ಅವರು ಹೇಳಿದ್ದಾರೆ.
ತಮ್ಮ ಸಮುದಾಯದ ಶಾಸಕರಿಗೆ ಕರೆ ಮಾಡಿದರೂ ಸಹಕಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಬಸವರಾಜ್, “7 ಜನ ಲಿಂಗಾಯತ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಸಮಾಜದವರ ಮುಂದೆ ನಾವು ನಿಂತು ಏನು ಹೇಳಬೇಕು? ಮುಂದಿನ ಚುನಾವಣೆಯಲ್ಲಿ ಮತ ಕೇಳುವುದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.