
ಮಂಗಳೂರು : ನಿಯಮ ಮೀರಿ ಧ್ವನಿವರ್ಧಕ ಬಳಸಿದ ಆರೋಪದ ಮೇಲೆ ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ, ಪುಂಜಾಲಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ನಡೆದಿದೆ.
ನಿಯಮ ಉಲ್ಲಂಘನೆ ಮತ್ತು ವಾಗ್ವಾದ
ಬುಧವಾರ ರಾತ್ರಿ ಪುಂಜಾಲಕಟ್ಟೆ ಗಣೇಶ ಮಂಟಪದಲ್ಲಿ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ, ಧ್ವನಿವರ್ಧಕ ಬಳಕೆಗೆ ಇರುವ ಕಾನೂನುಗಳನ್ನು ಪಾಲಿಸುವಂತೆ ಸೂಚಿಸಿದ್ದರು. ಆರಂಭದಲ್ಲಿ ಆಯೋಜಕರು ಧ್ವನಿವರ್ಧಕ ಸ್ಥಗಿತಗೊಳಿಸಿದ್ದರು.
ಆದರೆ, ರಾತ್ರಿ 11:50ರ ವೇಳೆಗೆ ಮತ್ತೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರು ಮತ್ತೆ ಪ್ರಶ್ನಿಸಿದಾಗ, ಸಮಿತಿ ಅಧ್ಯಕ್ಷ ಕೌಶಿಕ್ ಶೆಟ್ಟಿ, ಪುನೀತ್ ಮಡಂತ್ಯಾರು, ತಾರಾನಾಥ ಕಜಕ್ಕಾರು, ಗುರು ಮಡಂತ್ಯಾರು ಹಾಗೂ ಇತರ 10-15 ಜನರು ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಧಿಕ್ಕಾರ ಕೂಗಿ, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ದಾಖಲು ಮತ್ತು ತನಿಖೆ
ಆಯೋಜಕರಿಗೆ ನೀಡಿದ್ದ ಅನುಮತಿ ಪತ್ರದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿ ಧ್ವನಿವರ್ಧಕ ಬಳಸಿದ ಬಗ್ಗೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರೆದಿದೆ.