
ಬೆಂಗಳೂರು : ರಾಜ್ಯದಲ್ಲಿ ಮುಂಬರುವ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎಲೆಕ್ಟ್ರಾನಿಕ್ ಮತಯಂತ್ರ (EVM)ಗಳ ಮೂಲಕವಲ್ಲ, ಪರಂಪರೆಯ ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.
ಸಭೆಯ ನಂತರ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ EVM ಗಳ ಮೇಲಿನ ವಿಶ್ವಾಸ ಜನರಲ್ಲೂ ಕುಗ್ಗಿದೆ. ಆದ್ದರಿಂದ, ಮತದಾರರಲ್ಲಿ ಪಾರದರ್ಶಕತೆ ಹೆಚ್ಚಿಸಲು ಬ್ಯಾಲೆಟ್ ಪೇಪರ್ ಬಳಸುವಂತೆ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ” ಎಂದು ತಿಳಿಸಿದರು.
ಅದೇ ವೇಳೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಮತದಾರರ ಪಟ್ಟಿಗಳನ್ನು ಪರಿಷ್ಕರಿಸುವುದು, ಸಂಬಂಧಿತ ಕಾನೂನು ತಿದ್ದುಪಡಿಗಳು, ಹಾಗೂ ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಂಪುಟ ನಿರ್ಧಾರ ಕೈಗೊಂಡಿದೆ.
ಕನಕಪುರದಲ್ಲಿ ಹೊಸ ಮೆಡಿಕಲ್ ಕಾಲೇಜ್
ರಾಜ್ಯ ಸಚಿವ ಸಂಪುಟ ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಹೊಸ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಅನುಮೋದನೆ ನೀಡಿದೆ. ಈ ಯೋಜನೆಗಾಗಿ ಕರ್ನಾಟಕ ಗೃಹ ಮಂಡಳಿಯಿಂದ 25 ಎಕರೆ ಜಮೀನು ಖರೀದಿಸಲು 65 ಕೋಟಿ ರೂ. ಮೊತ್ತವನ್ನು ಮೀಸಲಿರಿಸಲಾಗಿದೆ.
‘ಆಶಾ ಕಿರಣ’ ಯೋಜನೆ ರಾಜ್ಯವ್ಯಾಪಿ
ಅಂಧತ್ವ ನಿವಾರಣೆ ಮತ್ತು ಕಣ್ಣಿನ ಆರೋಗ್ಯ ಪರೀಕ್ಷೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ‘ಆಶಾ ಕಿರಣ’ ಯೋಜನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಜಾರಿಗೆ ಬರಲಿದೆ. ಈ ಯೋಜನೆಗೆ ಒಟ್ಟು 52.85 ಕೋಟಿ ರೂ. ಅನುದಾನವನ್ನು ಸರ್ಕಾರ ಅನುಮೋದಿಸಿದೆ.
ರೈತರು ಮತ್ತು ಕನ್ನಡ ಹೋರಾಟಗಾರರಿಗೆ ಸಡಿಲಿಕೆ
ಹಿಂದಿನ ಚಳುವಳಿಗಳ ಸಂದರ್ಭ ರೈತರು ಹಾಗೂ ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಾಗಿದ್ದ 60 ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕೃಷಿ ಮಾರುಕಟ್ಟೆ ಶುಲ್ಕ ಪರಿಷ್ಕರಣೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕದಲ್ಲಿ ಸಣ್ಣ ಮಟ್ಟಿನ ಬದಲಾವಣೆ ಮಾಡಲಾಗಿದ್ದು, ಶುಲ್ಕವನ್ನು 41 ಪೈಸೆಯಿಂದ 42 ಪೈಸೆಗೆ ಏರಿಕೆ ಮಾಡಲಾಗಿದೆ. ಅಲ್ಲದೆ ವಹಿವಾಟು ವೆಚ್ಚವನ್ನು 0.01 ಪೈಸೆ ಹೆಚ್ಚಳ ಮಾಡಲಾಗಿದೆ.
ಮೆಟ್ರೋ ಹಂತ–3 ಎಲಿವೇಟೆಡ್ ಕಾರಿಡಾರ್
ಬೆಂಗಳೂರು ಮೂಲಸೌಕರ್ಯ ವಿಸ್ತರಣೆ ಯೋಜನೆಗೆ ಬಲ ತುಂಬುವಂತೆಯೇ, ಮೆಟ್ರೋ ಹಂತ–3 ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜೆಪಿನಗರ 4ನೇ ಹಂತದಿಂದ ಹೆಬ್ಬಾಳದವರೆಗೆ, ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ ಒಟ್ಟು 37.121 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.