
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಪಡುವರಿಯಲ್ಲಿ ಜನವಸತಿ ಪ್ರದೇಶದ ನಡುವೆಯೇ ಇರುವ ಮನೆಯೊಂದರ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಆಘಾತಕಾರಿ ಘಟನೆ ನಡೆದಿದೆ. ಪಡುವರಿಯ ಪಟವಾಲ್ ಹೌಸ್ ಎನ್ನುವ ನಿವಾಸದಲ್ಲಿ ಈ ಕಳವು ಸಂಭವಿಸಿದ್ದು, ಕಳ್ಳರು ಪಕ್ಕಾ ಸ್ಕೆಚ್ ಹಾಕಿ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಪರಮೇಶ್ವರ ಪಟವಾಲ್ ಅವರ ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ವಾಸವಿದ್ದ ಈ ಹಂಚಿನ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಹೊಂಚು ಹಾಕಿದ್ದ ಖದೀಮರು, ಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ. ಅಂದಾಜು 20 ಪವನ್ ಬಂಗಾರದ ಆಭರಣಗಳು ಮತ್ತು 2 ಲಕ್ಷ ರೂಪಾಯಿ ನಗದನ್ನು ಕಳ್ಳರು ಎಗರಿಸಿದ್ದಾರೆ. ವಿಶೇಷವೆಂದರೆ, ಮನೆಯ ಪಕ್ಕದಲ್ಲೇ ಪಡುವರಿ ಮತ್ತು ಸೋಮೇಶ್ವರ ರಸ್ತೆಗಳು ಹಾದುಹೋಗಿದ್ದು, ಸದಾ ಜನನಿಬಿಡವಾಗಿರುವ ಈ ಪ್ರದೇಶದಲ್ಲಿ ಸದ್ದಿಲ್ಲದೆ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹಂಚಿನ ಮನೆಯಾದ ಕಾರಣ ಕಳ್ಳರಿಗೆ ಒಳಪ್ರವೇಶಿಸಲು ಸುಲಭವಾಗಿದೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಬೈಂದೂರು ಠಾಣೆಯ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನವು ಮನೆಯಿಂದ ರಸ್ತೆಯವರೆಗೆ ತೆರಳಿ ಮರಳಿದ್ದು, ಮನೆಯ ಸಂಪೂರ್ಣ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ಪೊಲೀಸರಿಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಮಾರ್ಗದರ್ಶನದಲ್ಲಿ ಕಳ್ಳರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ತನಿಖೆ ಚುರುಕುಗೊಳಿಸಲಾಗಿದೆ.



































