
ಉಡುಪಿ: ಉದ್ಯಮದಲ್ಲಿ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಗಳಿಂದ ಕಂಗೆಟ್ಟ ಉದ್ಯಮಿಯೊಬ್ಬರು ಕಾರಿನೊಳಗೆ ವಿಷ ಸೇವಿಸಿ ನಂತರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುಃಖದ ಘಟನೆ ಎ.29ರ ಮುಂಜಾನೆ ಕಾರ್ಕಳ ತಾಲೂಕಿನ ನಿಟ್ಟೆ ದೂಪದಕಟ್ಟೆಯಲ್ಲಿ ನಡೆದಿದೆ.
ಮೃತರಾದವರು ಕಾರ್ಕಳ ಮೂಲದವರಾದ ಮಂಗಳೂರು ನಿವಾಸಿ ದಿಲೀಪ್ ಎನ್.ಆರ್. ಅವರು. ಮಂಗಳೂರಿನಲ್ಲಿ ವಾಸಿಸುತ್ತಿದ್ದ ದಿಲೀಪ್, ನಿನ್ನೆ ರಾತ್ರಿ ತಮ್ಮ ಕಾರಿನಲ್ಲಿ ಕಾರ್ಕಳದತ್ತ ಪ್ರಯಾಣಿಸುತ್ತಿದ್ದರು. ನಿಟ್ಟೆ ದೂಪಕಟ್ಟೆಯ ನವೋದಯ ಪ್ರಾಪರ್ಟಿಸ್ ಮುಂಭಾಗ ಕಾರನ್ನು ನಿಲ್ಲಿಸಿ, ವಿಷ ಸೇವಿಸಿದ ಬಳಿಕ ತಮ್ಮ ಬಳಿಯಿದ್ದ ಗನ್ ಬಳಸಿ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಿಲೀಪ್ ಎನ್.ಆರ್. ಅವರು ಕಾರ್ಕಳ ಪುರಸಭೆ ಸದಸ್ಯ ಸುಭೀತ್ ಎನ್.ಆರ್. ಅವರ ಸಹೋದರರಾಗಿದ್ದಾರೆ. ಆರ್ಥಿಕ ಬಿಕ್ಕಟ್ಟು ಮತ್ತು ಆರೋಗ್ಯ ಸಮಸ್ಯೆಗಳು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಕಾರಣ ಎಂದು ಶಂಕಿಸಲಾಗಿದೆ. ಘಟನೆ ಕುರಿತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.