
ಆಗುಂಬೆ: ಧಾರ್ಮಿಕ ಹಾಗೂ ಪ್ರವಾಸಿ ತಾಣವಿರುವ ಕುಂದಾದ್ರಿ ಬೆಟ್ಟದ ಮೆಟ್ಟಿಲು ರಸ್ತೆಯ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯ ಮಾನವ ದೇಹವೊಂದು ಪತ್ತೆಯಾಗಿದೆ. ಈ ಘಟನೆ ಸೋಮವಾರ ರಾತ್ರಿ ಬೆಳಕಿಗೆ ಬಂದಿದೆ.
ಟ್ರಕ್ಕಿಂಗ್‌ಗೆ ತೆರಳಿದ್ದ ತಂಡವೊಂದು ಶವವನ್ನು ಕಂಡು ಆತಂಕಗೊಂಡು ಕೂಡಲೇ ಆಗುಂಬೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರ ಪ್ರಕಾರ ಕುಂದಾದ್ರಿ ಬೆಟ್ಟದಲ್ಲಿ ಅನೈತಿಕ ಚಟುವಟಿಕೆಗಳು, ಅಕ್ರಮ ವ್ಯವಹಾರಗಳು, ಇಸ್ಪೀಟು ಸೇರಿದಂತೆ ಹಲವು ದಂಧೆಗಳು ನಡೆಯುತ್ತಿದ್ದವೆಂದು ಸಾಕಷ್ಟು ಬಾರಿ ದೂರಲಾಗಿದೆ. ಶವವನ್ನು ಸುಟ್ಟು ಹಾಕಿರುವ ರೀತಿಯಿಂದ ,ಇದು ಮೂರು ರಿಂದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಆಗುಂಬೆ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣದ ಹಿಂದಿರುವ ಸತ್ಯ ಹೊರಬರುವ ನಿರೀಕ್ಷೆಯಿದೆ.