
ಕುಂದಾಪುರ: “ಹೊಸ ಟವರ್ ನಿರ್ಮಾಣ ಮಾಡಿದ್ದರೂ ಸಮರ್ಪಕ ನೆಟ್‌ವರ್ಕ್ ಸಿಗುತ್ತಿಲ್ಲ” ಎಂಬ ಗ್ರಾಹಕರ ದೂರುಗಳು ಹೆಚ್ಚಾಗುತ್ತಿರುವ ಮಧ್ಯೆ, ಬಿಎಸ್‌ಎನ್ಎಲ್ ಅಧಿಕಾರಿಗಳ ವಿರುದ್ಧ ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಸಮಾಲೋಚನೆಯಲ್ಲಿ, ಟವರ್ ನಿರ್ಮಿಸಿ ಸೇವೆ ಕೊಡದೇ ಇರುವ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕಾಗಬಹುದು ಎಂಬ ಎಚ್ಚರಿಕೆಯನ್ನು ಅವರು ನೀಡಿದರು. ಬಿಎಸ್‌ಎನ್ಎಲ್ ವಿಶ್ವಾಸಾರ್ಹತೆ ಉಳಿಸಬೇಕಾದರೆ ಖಾಸಗಿ ಸಂಸ್ಥೆಗಿಂತ ಉತ್ತಮ ಸೇವೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ಸಮಸ್ಯೆ:
ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯದ ವೇಳೆ ಸಂಪರ್ಕ ಕಡಿತಗೊಳ್ಳುತ್ತಿದೆ. ಮಡಾಮಕ್ಕಿ, ಅಮಾಸೆಬೈಲು, ಬೊಳ್ಮೆನೆ ಭಾಗಗಳಲ್ಲಿ ಹೊಸ ಟವರ್ ಇದ್ದರೂ ಸೇವೆ ಸಿಗುತ್ತಿಲ್ಲ. ಬ್ಯಾಟರಿ ಬ್ಯಾಕಪ್, ಡೀಸೆಲ್ ಜನರೇಟರ್ ಮುಂತಾದ ಮೂಲಸೌಕರ್ಯಗಳ ಕೊರತೆ ಈ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸಿದರು.
ತುರ್ತು ಕ್ರಮಗಳ ತೀರ್ಮಾನ:
ಸಂಸದ ಹಾಗೂ ಶಾಸಕರ ಸಲಹೆಯಂತೆ , ಪ್ರತಿ ಟವರ್ ಇರುವ ಸ್ಥಳದಲ್ಲಿ ಡಿಜಿ ಬ್ಯಾಟರಿ ಒದಗಿಸಿ, ತುರ್ತು ಪರಿಸ್ಥಿತಿಗೆ ಪ್ರತ್ಯೇಕ ನಿರ್ವಹಣಾ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತ್‌ಗೂ ತಿಂಗಳಿಗೆ ₹3,000 ನಿರ್ವಹಣಾ ಭತ್ಯೆ ನೀಡಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
73 ಟವರ್‌ಗಳಿಗೆ ಬ್ಯಾಕಪ್ ಇಲ್ಲ:
ಜಿಲ್ಲೆಯ ಒಟ್ಟು 196 ಬಿಎಸ್‌ಎನ್ಎಲ್ ಟವರ್‌ಗಳ ಪೈಕಿ 73 ರಲ್ಲಿ ಬ್ಯಾಟರಿ ಬ್ಯಾಕಪ್ ಇಲ್ಲದ ಸ್ಥಿತಿಯಲ್ಲಿದ್ದು, ಕೇಂದ್ರ ಸರ್ಕಾರದ ಅನುದಾನದಿಂದ ಈಗಾಗಲೇ 10 ಬ್ಯಾಟರಿ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ. ಉಳಿದ ಟವರ್‌ಗಳಿಗೂ ಬೇಡಿಕೆ ಸಲ್ಲಿಸಲಾಗಿದೆ.
ಸಭೆಯಲ್ಲಿ ಭಾಗವಹಿಸಿದವರು:
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಪುರಸಭೆ ಅಧ್ಯಕ್ಷ ಕೆ. ಮೋಹನದಾಸ್ ಶೆಣೈ, ಬಿಎಸ್‌ಎನ್ಎಲ್ ಪಿಜಿಎಂ ನವೀನ್ ಗುಪ್ತಾ, ಮುಖ್ಯಸ್ಥ ಜನಾರ್ಧನ್, ನಾಮ ನಿರ್ದೇಶಿತ ಸದಸ್ಯರು ಹಾಗೂ ಗೋಪಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.