
ಬೆಂಗಳೂರು, (ಮಾರ್ಚ್.28): ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯಲ್ಲಿ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿ ಅನಿಲ್ ಸಾಂಬೆಕರ್ (32) ಅವರನ್ನು ಹತ್ಯೆ ಮಾಡಿ, ಮೃತದೇಹವನ್ನು ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಮನೆಯಿಂದ ಪರಾರಿಯಾಗಿದ್ದಾನೆ.
ಘಟನೆ ಬಳಿಕ ಆರೋಪಿ ಗೌರಿಯ ಪೋಷಕರಿಗೆ ಕರೆ ಮಾಡಿ ತನ್ನ ಕೃತ್ಯದ ಕುರಿತು ಮಾಹಿತಿ ನೀಡಿದ್ದು, ಬೆಚ್ಚಿಬಿದ್ದ ಪೋಷಕರು ಕೂಡಲೇ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದರು. ಅವರ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ದಂಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಕ್ ಫ್ರಂ ಹೋಮ್ ಹಿನ್ನೆಲೆ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಈ ದಂಪತಿ ನಡುವೆ ಏನಾದರೂ ವೈಮನಸ್ಸು ಉಂಟಾಗಿತ್ತೇ ಎಂಬುದು ತಿಳಿದು ಬಂದಿಲ್ಲ. ರಾಕೇಶ್ ಕೊಲೆ ಮಾಡಿದ ನಂತರ, ಅದೇ ಅಪಾರ್ಟ್‌ಮೆಂಟ್‌ನ ಮತ್ತೊಬ್ಬ ನಿವಾಸಿಗೆ ತನ್ನ ಪತ್ನಿ ಮೃತಪಟ್ಟಿದ್ದಾಳೆ ಎಂದು ಕರೆ ಮಾಡಿದ್ದಾನೆ. ಈ ವಿಷಯವನ್ನು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ ನಂತರ ಪೊಲೀಸರಿಗೆ ದೂರು ದಾಖಲಾಗಿದೆ.
ತಕ್ಷಣ ಸ್ಥಳಕ್ಕೆ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.