
ಬೆಂಗಳೂರು: ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸುವ ಬೆಳವಣಿಗೆಯಲ್ಲಿ, ಬಿಜೆಪಿ ಹೈಕಮಾಂಡ್ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಯತ್ನಾಳ್ ವಿರುದ್ಧ ಶಿಸ್ತು ಕ್ರಮ – ಕೇಂದ್ರ ನಾಯಕರ ತೀರ್ಮಾನ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದ ಯತ್ನಾಳ್‌ಗೆ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಉತ್ತರ ನೀಡಿದ್ದರೂ ಪಕ್ಷ ಶಿಸ್ತಿಗೆ ಧಕ್ಕೆಯುಂಟು ಮಾಡಿದ ಆರೋಪದ ಮೇಲೆ ಹೈಕಮಾಂಡ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಪಕ್ಷದಿಂದ ಹೊರದಬ್ಬಿದ ಕೇಂದ್ರ ನಾಯಕರು
ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಅವರ ಆದೇಶದ ಪ್ರಕಾರ, ಯತ್ನಾಳ್ ಅವರನ್ನು ತಕ್ಷಣದಿಂದಲೇ ಪಕ್ಷದಿಂದ ಹೊರದಬ್ಬಲಾಗಿದೆ. ಈ ನಿರ್ಧಾರ ಫೆಬ್ರವರಿ 10ರಂದು ಜಾರಿಗೊಂಡ ಶೋಕಾಸ್ ನೋಟಿಸ್ ನಂತರಕ್ಕೆ ಬಂದಿದೆ. ಪಕ್ಷದ ನಿರ್ದಿಷ್ಟ ಶಿಸ್ತಿನ ನಿಯಮಗಳನ್ನು ನಿರ್ಲಕ್ಷ್ಯ ಮಾಡಿದ ಕಾರಣ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಹೊರಗಿಡಲಾಗಿದೆ ಮತ್ತು ಪಕ್ಷದಲ್ಲಿ ಹೊಂದಿದ್ದ ಎಲ್ಲ ಹುದ್ದೆಗಳಿಂದ ಉಚ್ಚಾಟಿಸಲಾಗಿದೆ.
ಯತ್ನಾಳ್ ಪರ ವಲಯದಲ್ಲಿ ಕುತೂಹಲ
ಈ ಬೆಳವಣಿಗೆಯಿಂದ ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಯಾಗುವ ಸಾಧ್ಯತೆ ಇದೆ. ಯತ್ನಾಳ್ ಮುಂದೇನು ಮಾಡುವರು, ರಾಜಕೀಯ ಭವಿಷ್ಯ ಹೇಗಿರಲಿದೆ ಎಂಬ ಚರ್ಚೆಗಳು ಜೋರಾಗಿವೆ.