
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಕೆಲವೆಡೆ ಜನರು ಮನೆ ತೊರೆದು ಪರಾರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಅನಧಿಕೃತ ಸಾಲ ವಿತರಣೆಗೆ ಮುಕ್ತಾಯ ಘೋಷಿಸಲು ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೂ ರವಾನೆ ಮಾಡಲಾಗಿದೆ.
ರಾಜ್ಯದಲ್ಲಿ ಹಲವಾರು ಮಂದಿ ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ತುತ್ತಾಗಿ ಜೀವ ತ್ಯಜಿಸುವ ದುರ್ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಸರ್ಕಾರ ಸೂಕ್ತ ನಿಯಂತ್ರಣ ತರಲು ಮುಂದಾಗಿದ್ದು, ಅನಧಿಕೃತವಾಗಿ ಸಾಲ ನೀಡಿದರೆ ಮನ್ನಾ, ಹಾಗೂ ಕಿರುಕುಳ ನೀಡುವವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ. ೩ ರಂದು ಮೈಕ್ರೋಫೈನಾನ್ಸ್ ಬಿಲ್ ಪರಿಶೀಲನೆ ನಡೆಸಿದ್ದು, ಬಳಿಕ ರಾಜ್ಯಪಾಲರಿಗೆ ಅನುಮೋದನೆಗಾಗಿ ಕರಡು ಪ್ರತಿಯನ್ನು ಕಳುಹಿಸಿದ್ದಾರೆ. ಈ ಸುಗ್ರೀವಾಜ್ಞೆಯ ಅನುಮೋದನೆಯೊಂದಿಗೆ, ಅನಧಿಕೃತ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.