
ಉಡುಪಿ: ಅಂಪಾರಿನ ದಕ್ಕೆಯಿಂದ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಚಾಲಕ ವಸಂತ್ ಎಂಬುವವರಿಗೆ ಉಡುಪಿಯ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ:
ಅಂಪಾರಿನಿಂದ ಬ್ರಹ್ಮಾವರ ಕಡೆಗೆ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುವ ಮೂಲಕ ‘ಲಘು ಸಂಘಟಿತ ಅಪರಾಧ’ ಎಸಗಿದ್ದಾರೆ ಎಂಬ ಆರೋಪದಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಲಾರಿ ಚಾಲಕ ವಸಂತ್ ಅವರನ್ನು ಪೊಲೀಸರು ಬಂಧಿಸಿ, ಉಡುಪಿಯ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಕಾನೂನು ಕ್ರಮ:
ಆರೋಪಿಗಳ ವಿರುದ್ಧ ಹೊಸ ಕಾನೂನು ಸಂಹಿತೆಯಾದ B.N.S.S ಸೆಕ್ಷನ್ 112, 303(2) ಹಾಗೂ MMDR ಕಾಯ್ದೆಯ ಸೆಕ್ಷನ್ 4(1A) 2, (4) ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ.
ಆರೋಪಿಯ ಪರವಾಗಿ ಉಡುಪಿಯ ಖ್ಯಾತ ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿ ಅವರು ವಾದ ಮಂಡಿಸಿದ್ದರು.



































