
ಭುವನೇಶ್ವರ: ಪುರಿಯ ಜಗನ್ನಾಥ ದೇವಾಲಯದ ಗೋಡೆಯ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಸಂದೇಶಗಳು ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ದೇವಸ್ಥಾನವನ್ನು ಸ್ಫೋಟಿಸುವುದಾಗಿ ಈ ಬರಹಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ದೇವಸ್ಥಾನದ ಸುತ್ತಲಿನ ಪರಿಕ್ರಮ ಮಾರ್ಗದಲ್ಲಿರುವ ಬುಧಿ ಮಾ ದೇವಾಲಯದ ಗೋಡೆಗಳ ಮೇಲೆ ಈ ಬೆದರಿಕೆ ಸಂದೇಶಗಳನ್ನು ಬರೆಯಲಾಗಿದೆ. ಮತ್ತೊಂದು ಗೋಡೆಯ ಮೇಲೆ ಕೆಲವು ಫೋನ್ ಸಂಖ್ಯೆಗಳನ್ನು ಬರೆದು, ಅವುಗಳನ್ನು ಸಂಪರ್ಕಿಸದಿದ್ದರೆ ಗಲಭೆಗಳು ನಡೆಯುತ್ತವೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಮಾಹಿತಿ ಪಡೆದ ತಕ್ಷಣ ಪುರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬೆದರಿಕೆಗಳ ಮೂಲ ಮತ್ತು ಉದ್ದೇಶಗಳ ಬಗ್ಗೆ ತನಿಖೆ ಮುಂದುವರಿದಿದೆ.