
ಮಲ್ಪೆ: ಭಾರತ – ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಮಂಗಳೂರಿನ ಮಲ್ಪೆ ಬಂದರಿನಲ್ಲಿ ಮಂಗಳವಾರ ಸಂಜೆ ನಡೆದ ಬಾಂಬ್ ಸ್ಫೋಟದಂತಹ ಘಟನೆ ಕ್ಷಣಾಂತರದಲ್ಲಿ ಜನರಲ್ಲಿ ಆತಂಕ ಉಂಟುಮಾಡಿದೆ.
ಸಂಜೆ ಸುಮಾರು 4.30ಕ್ಕೆ ಬಂದರಿನಲ್ಲಿ ಇದ್ದ ಮೀನುಗಾರರು ಭಾರೀ ಸದ್ದು ಕೇಳಿದ ನಂತರ ಬೆಂಕಿಯ ಕೆನ್ನಾಲಿಗೆಯಿಂದ ಭಯಗೊಂಡು ಓಡಿದ ದೃಶ್ಯಗಳು ಕಂಡುಬಂದವು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಗಾಯಗೊಂಡಂತೆ ಕಂಡ ಐವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಆದರೆ, ಈ ಎಲ್ಲವೂ ನಿಜಘಟನೆ ಅಲ್ಲ. ಮಲ್ಪೆ ಮೀನುಗಾರರ ಸಂಘ, ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಕಸ್ಟಮ್ಸ್ ಜಂಟಿಯಾಗಿ ಈ ಅಣಕು ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಯುದ್ಧ ಸಂದರ್ಭ ಅಥವಾ ಸ್ಫೋಟದಂತಹ ಅಪಾಯದ ಪರಿಸ್ಥಿತಿಯಲ್ಲಿ ಹೇಗೆ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಅಭ್ಯಾಸ ನಡೆಸಲಾಯಿತು.
ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಈ ಕಾರ್ಯಾಚರಣೆಯನ್ನು ಸಾರ್ವಜನಿಕರ ಮುಂದೇ ಯಶಸ್ವಿಯಾಗಿ ಪ್ರದರ್ಶಿಸಿದವು. ನಂತರ ಕರಾವಳಿ ಕಾವಲು ಪಡೆ ಎಸ್‌ಪಿ ಮಿಥುನ್ ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲಿದ್ದ ಮೀನುಗಾರರಿಗೆ ಈ ಕಾರ್ಯಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.