
ಸುಬ್ರಹ್ಮಣ್ಯ: ಹಾಸನದಿಂದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಮೃತದೇಹ ಕುಮಾರಧಾರ ನದಿಯಲ್ಲಿ ಮೇ 11ರಂದು ಬೆಳಗ್ಗೆ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಹಾಸನದ ಗೀತಾ (51) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ನದಿಯಲ್ಲಿ ಶವ ತೇಲುತ್ತಿರುವ ದೃಶ್ಯವನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುಬ್ರಹ್ಮಣ್ಯ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ನಂತರ ಹಾಸನದ ಪೊಲೀಸರನ್ನು ಸಂಪರ್ಕಿಸಿದ ಬಳಿಕ, ಮೃತದೇಹವನ್ನು ಗೀತಾ ಎಂದು ಗುರುತಿಸಲಾಯಿತು.
ಮಹಿಳೆ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಎರಡು ದಿನದ ಹಿಂದೆ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಮನೆಯವರು ಆಕೆಯನ್ನು ಹುಡುಕಾಡುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೊಲೀಸರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಗುರುತಿಸಿದರು.
ಈ ಘಟನೆಗೆ ಸಂಬಂಧಿಸಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಾಥಮಿಕ ಮಾಹಿತಿಯಿಂದ ಇದು ಕೌಟುಂಬಿಕ ಕಲಹದ ಪರಿಣಾಮವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ.