
ಬೈಂದೂರು : ಬೈಂದೂರು ತಾಲೂಕಿನ ಮರವಂತೆ ಗ್ರಾಮದಲ್ಲಿ ಮಳೆಗಾಲದ ನಡುವೆಯೂ ಸೌಪರ್ಣಿಕಾ ನದಿಯಲ್ಲಿ ಅಪಾಯಕಾರಿ ಬೋಟಿಂಗ್ ನಡೆಸಲಾಗುತ್ತಿದ್ದು, ಇದು ಪ್ರವಾಸಿಗರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರೇಶ್ ಖಾರ್ವಿ ಕೊಡೆರಿ ಮಾಲೀಕತ್ವದ ‘ಮರವಂತೆ ಅಡ್ವೆಂಚರ್’ ಸಂಸ್ಥೆಯು ಶ್ರೀ ವರಹ ಮಹಾರಾಜ ಸ್ವಾಮಿ ದೇವಸ್ಥಾನದ ಹಿಂಬದಿಯಲ್ಲಿ ಈ ಬೋಟಿಂಗ್ ಚಟುವಟಿಕೆಗಳನ್ನು ನಡೆಸುತ್ತಿದೆ.
ನಿಯಮ ಉಲ್ಲಂಘನೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ
ರಾಜ್ಯಾದ್ಯಂತ ಎಲ್ಲಾ ಪ್ರವಾಸಿ ತಾಣಗಳಲ್ಲಿ ಮಳೆಗಾಲದಲ್ಲಿ ಬೋಟಿಂಗ್ ಮತ್ತು ವಿವಿಧ ಪ್ರವಾಸಿ ಕ್ರೀಡೆಗಳಿಗೆ ನಿರ್ಬಂಧವಿದ್ದರೂ, ಮರವಂತೆ ಅಡ್ವೆಂಚರ್ ಮೇ ತಿಂಗಳ ಕೊನೆಯ ವಾರದ ನಂತರವೂ ಯಾವುದೇ ನಿಯಮಗಳನ್ನು ಲೆಕ್ಕಿಸದೆ ಬೋಟಿಂಗ್ ನಡೆಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸೌಪರ್ಣಿಕಾ ನದಿಯು ಈ ಪ್ರದೇಶದಲ್ಲಿ ಪದೇಪದೇ ನೆರೆ ನೀರಿನಿಂದ ರಸ್ತೆಗಳು ಜಲಾವೃತಗೊಂಡರೂ, ಬೋಟ್ ಮಾಲೀಕರು ಅಪಾಯದ ಅರಿವಿದ್ದರೂ ಪ್ರತಿದಿನ ಬೋಟಿಂಗ್ ನಡೆಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ಮತ್ತು ಬಂದರು ಹಾಗೂ ಒಳನಾಡು ಜಲ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಸುಮ್ಮನಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಗಳಿಗೆ ಎಡೆಮಾಡಿದೆ. ಬೋಟ್ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರ ಪರವಾನಿಗೆಯನ್ನು ರದ್ದುಪಡಿಸಲು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಗಂಗೊಳ್ಳಿ ಅಳಿವೆ (ನದೀಮುಖ)ಯಲ್ಲಿ ಮೀನುಗಾರಿಕಾ ಬೋಟ್ ಮುಗುಚಿ ಮೂವರು ಮೀನುಗಾರರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇದೇ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಪ್ರವಾಸಿ ಬೋಟ್ ನಡೆಸುತ್ತಿರುವುದು ವಿಪರ್ಯಾಸವೇ ಸರಿ.