
ಬೆಂಗಳೂರು: ಪಹಲ್ವಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇದರ ಮಧ್ಯೆ ದೇಶದಾದ್ಯಂತ ಸಮರ ತಯಾರಿ ಅಭ್ಯಾಸ ನಡೆಯುತ್ತಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಭಾರತಾದ್ಯಂತ “ಬ್ಲ್ಯಾಕ್ ಔಟ್” ಅಣಕು ಪ್ರದರ್ಶನ (Mock Blackout Drill) ಆಯೋಜಿಸಲಾಗಿದೆ. ಇದರ ಭಾಗವಾಗಿ ಬೆಂಗಳೂರಿನ ಹಲಸೂರಿನ ಭಾಗದಲ್ಲಿ, ಎರಡು ನಿಮಿಷಗಳ ಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಬ್ಲ್ಯಾಕ್ ಔಟ್ ಡ್ರಿಲ್ ನಡೆಸಲಾಯಿತು.
ಮಾಕ್ಡ್ ಡ್ರಿಲ್ ಸಮಯದಲ್ಲಿ ಮೊದಲಿಗೆ ಎರಡು ನಿಮಿಷಗಳ ಕಾಲ ಯುದ್ಧ ಸೈರನ್ ಮೊಳಗಿಸಲಾಯ್ತು. ನಂತರ ಸಾರ್ವಜನಿಕರು ಯುದ್ಧದ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.
ಬ್ಲ್ಯಾಕ್ ಔಟ್ ಡ್ರಿಲ್ ದೆಹಲಿ, ಬಿಹಾರ್, ಉತ್ತರ ಪ್ರದೇಶ ಮತ್ತು ಕರ್ನಾಟಕದ ಪ್ರಮುಖ ನಗರಗಳಲ್ಲಿ ಕೂಡ ಜರುಗಿದ್ದು, ಆತಂಕ ಬೇಡ ಎಂಬ ಸೂಚನೆ ಸಾರ್ವಜನಿಕರಿಗೆ ನೀಡಲಾಗಿದೆ.
ಈ ಅಭ್ಯಾಸವು ಯುದ್ಧ ಸನ್ನಿವೇಶಗಳಲ್ಲಿ ನಾಗರಿಕರ ತುರ್ತು ತಯಾರಿಯ ಮಟ್ಟವನ್ನು ಪರೀಕ್ಷಿಸುವ ಉದ್ದೇಶ ಹೊಂದಿತ್ತು.