
ಮೈಸೂರು: ಸುಂದರ ಯುವತಿಯರನ್ನು ಬಳಸಿಕೊಂಡು ಉದ್ಯಮಿಗಳಿಗೆ ಬಲೆ ಬೀಸುತ್ತಿದ್ದ ‘ಹನಿಟ್ರ್ಯಾಪ್’ ಜಾಲವನ್ನು ಮೈಸೂರು ಪೊಲೀಸರು ಭೇದಿಸಿದ್ದಾರೆ. ತಿಂಗಳುಗಳಿಂದ ಪೊಲೀಸರ ಕಣ್ತಪ್ಪಿಸಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಗಳಾದ ಸೈಫ್ ಮತ್ತು ಕವನ ಜೋಡಿಯನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ: ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದ ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ಅವರು ಈ ಹನಿಟ್ರ್ಯಾಪ್ ಜಾಲದ ಬಲೆಗೆ ಬಿದ್ದಿದ್ದರು. ಕವನಾಳ ಆಕರ್ಷಣೆಗೆ ಮರುಳಾಗಿದ್ದ ದಿನೇಶ್‌ರನ್ನು ಆರೋಪಿಗಳು ಏಕಾಂತದ ಕ್ಷಣದಲ್ಲಿ ಸೆರೆಹಿಡಿದಿದ್ದರು. ನಂತರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬರೋಬ್ಬರಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ದಿನೇಶ್ ಕುಮಾರ್ ಬೈಲಕುಪ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸ್ ಪೇದೆಯ ಕೈವಾಡ: ಪ್ರಕರಣದ ತನಿಖೆ ನಡೆಸಿದಾಗ, ಈ ಹನಿಟ್ರ್ಯಾಪ್ ಜಾಲದ ಹಿಂದೆ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಪೇದೆ ಶಿವಣ್ಣನನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಲಾಗಿದೆ. ರಕ್ಷಕರೇ ಭಕ್ಷಕರಾದ ಈ ಘಟನೆ ಇಡೀ ಪೊಲೀಸ್ ಇಲಾಖೆಗೆ ಮುಜುಗರ ತಂದಿಟ್ಟಿತ್ತು.
ಕೇರಳದಲ್ಲಿ ಸೆರೆ: ಪೇದೆ ಶಿವಣ್ಣ ಬಂಧನಕ್ಕೊಳಗಾದ ತಕ್ಷಣ, ಪ್ರಮುಖ ಆರೋಪಿಗಳಾದ ಕವನ ಮತ್ತು ಸೈಫ್ ರಾಜ್ಯ ಬಿಟ್ಟು ಕೇರಳಕ್ಕೆ ಪರಾರಿಯಾಗಿದ್ದರು. ಆದರೆ, ಪಟ್ಟು ಬಿಡದ ಮೈಸೂರು ಪೊಲೀಸರು, ಎಸ್‌ಪಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ, ಬೈಲಕುಪ್ಪೆ ಪಿಎಸ್‌ಐ ರವಿಕುಮಾರ್ ನೇತೃತ್ವದ ವಿಶೇಷ ತಂಡ ಕೇರಳಕ್ಕೆ ತೆರಳಿತ್ತು. ಕಣ್ಣೂರಿನ ಲಾಡ್ಜ್‌ವೊಂದರಲ್ಲಿ ಅಡಗಿಕೊಂಡಿದ್ದ ಈ ಜೋಡಿಯನ್ನು ಸಿಬ್ಬಂದಿಗಳಾದ ವಿಜಯ್ ಪವರ್, ಮುದ್ದುರಾಜ್, ಹಾಗೂ ಮಹಿಳಾ ಪೇದೆ ಅಶ್ವಿತಾ ಅವರು ಖಚಿತ ಮಾಹಿತಿ ಆಧರಿಸಿ ಬಲೆ ಬೀಸಿ ಹಿಡಿದಿದ್ದಾರೆ.
ಸದ್ಯ ಆರೋಪಿ ಜೋಡಿಯನ್ನು ಮೈಸೂರಿಗೆ ಕರೆತಂದಿರುವ ಬೈಲಕುಪ್ಪೆ ಪೊಲೀಸರು, ಕೃತ್ಯ ನಡೆದ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸುತ್ತಿದ್ದಾರೆ. ತನಿಖೆ ವೇಳೆ ಈ ಜೋಡಿ ರಾಜ್ಯದ ಬೇರೆಡೆಗಳಲ್ಲೂ ಇದೇ ರೀತಿಯ ಹನಿಟ್ರ್ಯಾಪ್ ನಡೆಸಿರುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.