
ಕಾರ್ಕಳ: ಜನಪರ ಆಡಳಿತ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾರದೆ, ಕಾರ್ಕಳದಲ್ಲಿ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದ್ದು, ಇದನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತಿಳಿಸಿದ್ದಾರೆ.
ಜನಪರ ಯೋಜನೆಗಳ ವಿರುದ್ಧ ಸುಳ್ಳು ಅಭಿಯಾನ
ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಯುವನಿಧಿ, ಶಕ್ತಿ ಯೋಜನೆಗಳಂತಹ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಹಾಗೂ ಸಾಮಾನ್ಯ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರದ ವಿರುದ್ಧ ಬಿಜೆಪಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಜನಪರ ಯೋಜನೆಗಳ ಪರಿಣಾಮವಾಗಿ ಸರ್ಕಾರದ ಮೇಲೆ ವಿಶ್ವಾಸ ಬೆಳೆದಿರುವ ಜನರನ್ನು ತಪ್ಪುದಾರಿಗೆ ಒಯ್ಯಲು ಬಿಜೆಪಿ ಸುಳ್ಳು ಹಗರಣಗಳಿಗೆ ಕೈಹಾಕಿದೆ ಎಂದು ಅವರು ಆರೋಪಿಸಿದರು.
ಭಯೋತ್ಪಾದಕ ಸುಳ್ಳು ಪ್ರಚಾರ
ಬಿಜೆಪಿಯು ಕಾರ್ಕಳದಲ್ಲಿ ತಮ್ಮ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಸುಳ್ಳು ಮಾಹಿತಿ ಹರಡುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಮೂಲಕ ಜನರಿಗೆ ದೂರವಾಣಿ ಕರೆ ಮಾಡಿಸಿ, “ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುತ್ತಿದೆ, ಉಳಿಸಿಕೊಳ್ಳಲು ಪ್ರತಿಭಟನೆಯಲ್ಲಿ ಭಾಗವಹಿಸಿ” ಎಂಬ ಸುಳ್ಳು ಪ್ರಚಾರ ನಡೆಸುತ್ತಿದೆ. “911 ಮಾಡಿಸಬೇಕಾದರೆ ಫೆಬ್ರವರಿ 6ರಂದು ಕಾರ್ಕಳಕ್ಕೆ ಬನ್ನಿ” ಎಂಬ ಸಂದೇಶವನ್ನು ಹರಡಲಾಗುತ್ತಿದೆ. ಈ ಕೀಳುಮಟ್ಟದ ರಾಜಕೀಯ ಜನ ವಿರೋಧಿಯಾಗಿದೆ ಎಂದು ಶುಭದರಾವ್ ತಿಳಿಸಿದ್ದಾರೆ.
ಬೆಲೆ ಏರಿಕೆ, ಜಿಎಸ್ಟಿ ವಿಷಯದಲ್ಲಿ ಮೌನ, ಈಗ ಕಪಟ ವಿರೋಧ
ಬಿಜೆಪಿಯು ಈಗ ಬೆಲೆ ಏರಿಕೆಯ ಕುರಿತಂತೆ ಪ್ರಚೋದನಾತ್ಮಕ ಪ್ರಚಾರ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಜಿಎಸ್ಟಿ, ಪೆಟ್ರೋಲ್, ಆಹಾರ ಪದಾರ್ಥಗಳ ಬೆಲೆ, ಹಾಲಿನ ಮೇಲಿನ ತೆರಿಗೆ ಏರಿಸಿದ್ದಾಗ, ಅದನ್ನು ಸಮರ್ಥಿಸಿತ್ತು. “ಈಗ ಜನಪರ ಕಾಳಜಿ ತೋರಿಸುವಂತಹ BJP ನಾಟಕ ಹಾಸ್ಯಾಸ್ಪದವಾಗಿದೆ” ಎಂದು ಶುಭದರಾವ್ ವ್ಯಂಗ್ಯವಾಡಿದರು.
ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಜನರು ಕಿವಿಗೊಡಬಾರದು
ಬಿಜೆಪಿಯ ಪ್ರತಿಭಟನೆಗೆ ಜನರಿಂದ ಬೆಂಬಲ ದೊರಕದೆ, ಕಂಗಾಲಾಗಿರುವ ಕಾರಣ ವಾಮ ಮಾರ್ಗ ಹಿಡಿದಿದೆ. ಜನರ ದಾರಿ ತಪ್ಪಿಸಿ ಪ್ರತಿಭಟನೆಯಲ್ಲಿಗೆ ತರಲು ಬಿಜೆಪಿ ಮಾಡುತ್ತಿರುವ ಈ ಪ್ರಯತ್ನ ನಾಚಿಕೆಗೇಡಿನ ಸಂಗತಿ. ಜನರು ಈ ಸುಳ್ಳು ಮಾಹಿತಿಗಳಿಗೆ ಮರುಳಾಗಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.