
ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಸುಹಾಸ್ ಶೆಟ್ಟಿ ಪ್ರಕರಣದ ಹಿನ್ನಲೆಯಲ್ಲಿ ಬಿಜೆಪಿ ಮಂಗಳೂರಿನಲ್ಲಿ ಕೋಮು ಅಶಾಂತಿ ಉಂಟುಮಾಡುವ ಯತ್ನಕ್ಕೆ ಮುಂದಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಹಾಗೂ ಸ್ಪೀಕರ್ ಖಾದರ್ ಭಾಗವಹಿಸಿದ್ದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿತ ಸ್ಥಿತಿಯಲ್ಲಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ ಎಂದರು. ಯಾವುದೇ ಪ್ರಚೋದನಕಾರಿ ಭಾಷಣಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುವ ಸೂಕ್ಷ್ಮ ವಿಷಯಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ ಎಂದು ತಿಳಿಸಿದರು.
ಸುಹಾಸ್ ಶೆಟ್ಟಿ ಪ್ರಕರಣದ ಪ್ಲಾನ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಯಿತು ಎಂದು ಗುಂಡೂರಾವ್ ಆರೋಪಿಸಿದರು. “ಮಂಗಳೂರಿನಲ್ಲಿ ಧರ್ಮ ಆಧಾರಿತ ಸಂಘಟನೆಗಳು ಸಮಾಜದಲ್ಲಿ ಭಿನ್ನತೆ ಉಂಟುಮಾಡಲು ಪ್ರಯತ್ನಿಸುತ್ತಿವೆ. ಬಿಜೆಪಿಯ ಬೆಂಕಿ ಹಚ್ಚುವ ಪ್ರಯೋಗವನ್ನು ನಮ್ಮ ಸರ್ಕಾರ ವಿಫಲಗೊಳಿಸಿದೆ,” ಎಂದರು.
ಅಂತೆಯೇ ಬಿಜೆಪಿ ನಾಯಕರಿಗೆ ಸಂದೇಶ ನೀಡಿದ ಅವರು, “ಸೌಹಾರ್ದತೆ ಮತ್ತು ಶಾಂತಿಗೆ ಎಲ್ಲರೂ ಬದ್ಧರಾಗಬೇಕು. ರಾಜಕೀಯ ಬೇರೆ, ಆದರೆ ಕೋಮು ಶಾಂತಿ ಉಳಿಸಲು ನಾವು ಕೈಜೋಡಿಸಬೇಕು,” ಎಂದಿದ್ದಾರೆ.