
ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ರಾಜ್ಯ ಸರ್ಕಾರದ ನಿಲುವು ಖಂಡಿಸಿ, ಬಿಜೆಪಿ ನಾಳೆಯಿಂದ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ “ಧರ್ಮಯುದ್ಧ” ಹೋರಾಟವನ್ನು ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ.
ಸರ್ಕಾರವೇ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದೆಯೇ?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿಷಯವಾಗಿ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ನಮಗೂ ಅನುಮಾನಗಳಿವೆ ಎಂದರು. “ಬೇರೆ ಬೇರೆ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ 24 ಗಂಟೆಯೊಳಗೆ ಪ್ರಕರಣ ದಾಖಲಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಾರೆ. ಆದರೆ ಧರ್ಮಸ್ಥಳದ ವಿಷಯದಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಏಕೆ ಕ್ರಮ ತೆಗೆದುಕೊಂಡಿಲ್ಲ?” ಎಂದು ಅವರು ಪ್ರಶ್ನಿಸಿದರು.
ಇದು ಒಂದು ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದ ವಿಜಯೇಂದ್ರ, ಈ ಅಪಪ್ರಚಾರವನ್ನು ತಡೆಯುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇರಲಿಲ್ಲವೇ ಅಥವಾ ಸರ್ಕಾರವೇ ಈ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ
“ರಾಜ್ಯಾದ್ಯಂತ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಈ ಅಪಪ್ರಚಾರಗಳನ್ನು ಸರ್ಕಾರ ತಡೆದಿಲ್ಲ. ಯಾವ ದುಷ್ಟಶಕ್ತಿಗಳು ಈ ಷಡ್ಯಂತ್ರದ ಹಿಂದೆ ಕೆಲಸ ಮಾಡುತ್ತಿವೆ? ಇದನ್ನು ತಡೆಯುವ ಕೆಲಸವನ್ನು ಸರ್ಕಾರ ಮಾಡದೆ ಇರುವುದು ದುರದೃಷ್ಟಕರ” ಎಂದು ಅವರು ಹೇಳಿದರು. ಸರ್ಕಾರದ ಈ ಧೋರಣೆಯನ್ನು ಖಂಡಿಸಿ ನಾಳೆಯಿಂದ ಒಂದು ವಾರಗಳ ಕಾಲ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ವಿಜಯೇಂದ್ರ ತಿಳಿಸಿದರು.