
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನ ಸೆ.17ರಿಂದ ಅ.2ರ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ವರೆಗೆ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ‘ಸೇವಾ ಪಾಕ್ಷಿಕ ಅಭಿಯಾನ’ದ ಜಿಲ್ಲಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ, ಅಭಿಯಾನದ ಜಿಲ್ಲಾ ಮತ್ತು ಮಂಡಲ ತಂಡವನ್ನು ಘೋಷಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ವೀಕ್ಷಣೆಯ ಫೋಟೋ, ವರದಿ ಅಪ್ಲೋಡ್ ಪ್ರಕ್ರಿಯೆಯಲ್ಲಿ ಜಿಲ್ಲೆಯ 100% ಸಾಧನೆಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ದೊರೆತ ಹಿನ್ನೆಲೆಯಲ್ಲಿ ‘ಮನ್ ಕೀ ಬಾತ್’ ಜಿಲ್ಲಾ ಮತ್ತು ಮಂಡಲ ತಂಡಗಳ ಸದಸ್ಯರಿಗೆ ಪಕ್ಷದ ಶಾಲು ಹೊದೆಸಿ ಅಭಿನಂದಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ವೀಕ್ಷಣೆ ಮತ್ತು ಮಂಡಲವಾರು ಸಂಘಟನಾತ್ಮಕ ಕೆಲಸ ಕಾರ್ಯಗಳ ಪ್ರಗತಿ ಅಭಿನಂದನೀಯ. ಜಿ.ಎಸ್.ಟಿ ಸುಧಾರಣೆಯಿಂದ ದೇಶವಾಸಿಗಳಿಗೆ ಲಭಿಸುವ ಪ್ರಯೋಜನದ ಕುರಿತು ಪಕ್ಷದ ಕಾರ್ಯಕರ್ತರು ಜನಮಾನಸದಲ್ಲಿ ಅರಿವು ಮೂಡಿಸಬೇಕು. ಅ.2ರಂದು ಸೇವಾ ಪಾಕ್ಷಿಕ ಚಟುವಟಿಕೆಗಳ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತ ಸಂಭ್ರಮ ವರ್ಷದ ವಿಜಯ ದಶಮಿಯ ಪೂರ್ಣ ಗಣವೇಶದ ಪಥ ಸಂಚಲನದಲ್ಲಿ ಪಕ್ಷದ ಕಾರ್ಯಕರ್ತರು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಮಂಡಲ ಮಟ್ಟದ ಕಾರ್ಯಾಗಾರಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನದ ಎಲ್ಲಾ ಸೇವಾ ಕಾರ್ಯಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲರೂ ಬದ್ಧತೆಯಿಂದ ಕೈಜೋಡಿಸಬೇಕು ಎಂದರು.
ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಶ್ರೀಕಾಂತ್ ನಾಯಕ್ ಸೇವಾ ಪಾಕ್ಷಿಕ ಅಭಿಯಾನದಲ್ಲಿ ಜಿಲ್ಲೆ, ಮಂಡಲ ಮತ್ತು ಬೂತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಸೇವಾ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಬಿಜೆಪಿ ಶಿವಮೊಗ್ಗ ನಿಕಟಪೂರ್ವ ಜಿಲ್ಲಾಧ್ಯಕ್ಷ ಮೇಘರಾಜ್ ಅವರು ಸಮಾರೋಪ ಅವಧಿಯಲ್ಲಿ, ದೇಶ ಮತ್ತು ರಾಜ್ಯದ ಪ್ರಚಲಿತ ವಿದ್ಯಮಾನಗಳನ್ನು ವಿಶ್ಲೇಷಿಸಿ ಮಾತನಾಡಿ, ಜನರ ಧನಾತ್ಮಕ ಚಿಂತನೆಗಳನ್ನು ಅನುಮಾನಕ್ಕೆ ತಳ್ಳುವುದರಲ್ಲಿ ಕಾಂಗ್ರೆಸ್ ನಿಪುಣತೆ ಹೊಂದಿದೆ. ಆದರೆ ಕಾಂಗ್ರೆಸ್ಸಿನ ಯಾವುದೇ ಅಪಪ್ರಚಾರಗಳಿಂದ ಬಿಜೆಪಿಯಂತಹ ಬಲಾಡ್ಯ ಸಂಘಟನೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಸೇವಾ ಪಾಕ್ಷಿಕ ಅಭಿಯಾನದ ಎಲ್ಲಾ ಸೇವಾ ಚಟುವಟಿಕೆಗಳು ಅತ್ಯುತ್ತಮವಾಗಿ ಮೂಡಿಬರಲಿ ಎಂದು ಹಾರೈಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪೆರಣoಕಿಲ ಶ್ರೀಶ ನಾಯಕ್, ಸದಾನಂದ ಉಪ್ಪಿನಕುದ್ರು, ಜಯರಾಮ ಸಾಲಿಯಾನ್, ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ನಳಿನಿ ಪ್ರದೀಪ್ ರಾವ್ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಸಂಚಾಲಕರು, ಅಭಿಯಾನದ ಜಿಲ್ಲಾ ಮತ್ತು ಮಂಡಲಗಳ ಸಂಚಾಲಕರು, ಸಹ ಸಂಚಾಲಕರು, ನಗರಸಭಾ ಸದಸ್ಯರ ಸಹಿತ ವಿವಿಧ ಸ್ತರದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಂಚಾಲಕ ಮಹಾವೀರ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಅಭಿಯಾನದ ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ ಅಂಬಲಪಾಡಿ ವಂದಿಸಿದರು.