
ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ನಿನ್ನೆ ದಿನಾಂಕ 18-08-2025 ರಂದು ಅತಿಯಾದ ಮಳೆ ಹಾಗೂ ಸುಂಟರ ಗಾಳಿಯಿಂದಾಗಿ ಸುಮಾರು ನೂರಕ್ಕೂ ಹೆಚ್ಚಿನ ವಾಸದ ಮನೆಗಳಿಗೆ ಹಾನಿಯಾಗಿದ್ದು, ಜೊತೆಗೆ ಬೆಳೆ ಹಾನಿ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಅಪಾರ ಹಾನಿ ಉಂಟಾಗಿರುತ್ತದೆ.
ಕಾರ್ಕಳ ತಾಲೂಕಿನ ಬೆಳ್ಮಣ್, ಸೂಡ, ನಂದಳಿಕೆ, ರೆಂಜಾಳ, ಬೈಲೂರು ಹಾಗೂ ಯರ್ಲಪಾಡಿ ಗ್ರಾಮಗಳ ಪರಿಸರದಲ್ಲಿ ಮತ್ತು ಹೆಬ್ರಿ ತಾಲೂಕಿನ ಚಾರ ಕುಚ್ಚೂರು ಮತ್ತು ಮುದ್ರಾಡಿ ಗ್ರಾಮಗಳ ಪರಿಸರದಲ್ಲಿ ನಿನ್ನೆಯ ಸಂಜೆಯ ಹೊತ್ತಿಗೆ ಒಮ್ಮೆಲೆ ಬಂದ ಸುಂಟರಗಾಳಿ ಹಾಗೂ ಅತಿಯಾದ ಮಳೆ ಗಾಳಿಯಿಂದ ಆ ಪ್ರದೇಶದ ಹಲವು ಕಡೆಗಳಲ್ಲಿ ವಾಸದ ಮನೆಗಳು , ಕೃಷಿ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿದ್ದು, ತುರ್ತು ಪರಿಹಾರೋಪಾಯಗಳನ್ನು ಒದಗಿಸುವುದು ತುಂಬಾ ಅವಶ್ಯಕವಾಗಿರುತ್ತದೆ. ಇದರ ಜೊತೆಗೆ ಕಳೆದು 3 ತಿಂಗಳುಗಳಿಂದ ನಿರಂತರ ಮಳೆಯಿಂದಾಗಿ ಕೆಲವು ಕಡೆ ಕ್ಷೇತ್ರದ ರಸ್ತೆಗಳು ತೀರ ಹದಗೆಟ್ಟಿದ್ದು ಇದರ ದುರಸ್ತಿಯು ಅತ್ಯಂತ ಅವಶ್ಯಕವಾಗಿದೆ.
ಪ್ರಾಕೃತಿಕ ವಿಕೋಪದಿಂದ ಪ್ರಮುಖವಾಗಿ ವಾಸದ ಮನೆಗಳಿಗೆ ಆಗಿರುವ ಹಾನಿಗೆ ಸಂಬಂಧಿಸಿದಂತೆ ತಾಲೂಕು ಆಡಳಿತ ಹಾನಿಯ ಕುರಿತು ಅಂದಾಜು ವೆಚ್ಚದ ಮಾಹಿತಿಯನ್ನು ಕ್ರೂಢಿಕರಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಾಗೂ ಸರಕಾರ ಕೂಡಲೇ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡಬೇಕೆಂದು ಬಿಜೆಪಿ ಕಾರ್ಕಳದ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಆಗ್ರಹಿಸಿರುತ್ತಾರೆ.