
ಬೆಂಗಳೂರು : ರಾಮನಗರದ ಜಾಲಿವುಡ್ ಸ್ಟುಡಿಯೋಗೆ ಹಾಕಲಾಗಿದ್ದ ಸೀಲ್ ಅನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದು, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಶೂಟಿಂಗ್‌ಗೆ ಮತ್ತೆ ಅವಕಾಶ ದೊರೆತಿದೆ. ಇದರ ಬೆನ್ನಲ್ಲೇ ಎಲ್ಲಾ 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ.
ನಸುಕಿನ ಜಾವ 2:45ಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್‌ಪಿ ಶ್ರೀನಿವಾಸ್ ಗೌಡ, ತಹಶೀಲ್ದಾರ್ ತೇಜಸ್ವಿನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಜಾಲಿವುಡ್ ಸ್ಟುಡಿಯೋದ ಗೇಟ್ ಸೀಲ್ ಅನ್ನು ತೆರೆದರು. ಇದರ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯು ಬಿಗ್ ಬಾಸ್‌ನ ಹೊಸ ಪ್ರೋಮೋವನ್ನು ಸಹ ಬಿಡುಗಡೆ ಮಾಡಿದೆ.
ಡಿಸಿಎಂ ನಿರ್ದೇಶನದಂತೆ ತೆರವು, ಭಾಗಶಃ ಅನುಮತಿ
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಸ್ಟುಡಿಯೋದ ಸೀಲ್ ತೆರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
- ಜಾಲಿವುಡ್ ಸ್ಟುಡಿಯೋಸ್‌ನ ಗೇಟ್ ಸಿ (Gate C) ಮಾತ್ರ ಓಪನ್‌ಗೆ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಸಂಪರ್ಕ ಕಲ್ಪಿಸುವ ಈ ಗೇಟ್ ಅನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಯಿತು.
- “ಜಾಲಿವುಡ್ ಸಂಪೂರ್ಣ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿಲ್ಲ. ಕೇವಲ ಬಿಗ್ ಬಾಸ್ ಶೋ ಸ್ಪರ್ಧಿಗಳು, ಸಿಬ್ಬಂದಿ ಓಡಾಟ ಹಾಗೂ ಅಗತ್ಯ ವಸ್ತುಗಳ ಬಳಕೆಗೆ ಮಾತ್ರ ಅವಕಾಶ ಕೊಡಲಾಗಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದರು.
- ಬಿಗ್ ಬಾಸ್ ಶೂಟಿಂಗ್ ಸಂಪೂರ್ಣವಾಗಿ ಆರಂಭವಾಗುವ ಬಗ್ಗೆ ಇಂದು (ಬುಧವಾರ) ತೀರ್ಮಾನವಾಗಲಿದೆ ಎಂದು ಅವರು ಹೇಳಿದ್ದಾರೆ.
ಈಗಲ್‌ಟನ್ ರೆಸಾರ್ಟ್‌ನಲ್ಲಿದ್ದ ಎಲ್ಲಾ ಸ್ಪರ್ಧಿಗಳನ್ನು ಮುಂಜಾನೆ 4 ಗಂಟೆ ಸುಮಾರಿಗೆ ಕಾರಿನ ಗಾಜಿಗೆ ಕಪ್ಪು ಬಟ್ಟೆ ಸುತ್ತಿ, ಸಿಬ್ಬಂದಿಗಳು ಬಿಗ್ ಬಾಸ್ ಮನೆಗೆ ರಹಸ್ಯವಾಗಿ ಕರೆತಂದಿದ್ದಾರೆ.



































