
ಭೋಪಾಲ್ : ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯೊಬ್ಬಳನ್ನು ಕೊಂದು, ಆಕೆಯ ಶವದ ಪಕ್ಕದಲ್ಲೇ ಎರಡು ದಿನ ಮಲಗಿದ್ದ ಅಮಾನುಷ ಘಟನೆ ಭೋಪಾಲ್‌ನ ಗಾಯತ್ರಿ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ವಿವರ:
ಹತ್ಯೆಗೆ ಒಳಗಾದ ಮಹಿಳೆಯನ್ನು ರಿತಿಕಾ ಸೇನ್ (29) ಎಂದು ಗುರುತಿಸಲಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆರೋಪಿ ಸಚಿನ್ ರಜಪೂತ್ (32) ವಿದಿಶಾದ ಸಿರೋಂಜ್ ಮೂಲದವನಾಗಿದ್ದು, ಈತನಿಗೆ ಈಗಾಗಲೇ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ರಿತಿಕಾ ಮತ್ತು ಸಚಿನ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಕಳೆದ 9 ತಿಂಗಳಿಂದ ಭೋಪಾಲ್‌ನ ಗಾಯತ್ರಿ ನಗರದ ಮನೆ ಒಂದರಲ್ಲಿ ಅವರು ವಾಸವಾಗಿದ್ದರು.
ಹತ್ಯೆಗೆ ಕಾರಣ:
ಜೂನ್ 27ರಂದು ರಾತ್ರಿ, ರಿತಿಕಾ ಮತ್ತು ಸಚಿನ್ ನಡುವೆ ಜಗಳ ಉಂಟಾಗಿದೆ. ಸಚಿನ್ ತನ್ನ ಗೆಳತಿಯು ಕಂಪನಿಯ ಬಾಸ್ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದಾನೆ. ವಾದ-ವಿವಾದ ತೀವ್ರಗೊಂಡಿದ್ದು, ಕೋಪದ ಭರದಲ್ಲಿ ಸಚಿನ್, ರಿತಿಕಾಳ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ.
ಘಟನೆಯ ನಂತರ:
ಹತ್ಯೆಯ ಬಳಿಕ ಸಚಿನ್, ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಅದರ ಪಕ್ಕದಲ್ಲೇ ಎರಡು ದಿನ ಮಲಗಿದ್ದಾನೆ. ಈ ಅವಧಿಯಲ್ಲಿ ಆತ ಕುಡಿದು ನಶೆಯಲ್ಲಿರುವಾಗ, ತನ್ನ ಸ್ನೇಹಿತ ಅನೂಜ್‌ಗೆ ಕರೆ ಮಾಡಿ ನಡೆದಿದ್ದನ್ನು ವಿವರಿಸಿದ್ದಾನೆ . ಆದರೆ, ಸ್ನೇಹಿತ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಮೂರನೇ ದಿನದಂದು ಮತ್ತೆ ಅಂತಹದ್ದೇ ಮಾತು ಹೇಳಿದಾಗ, ಅನೂಜ್ ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ರಿತಿಕಾಳ ಮೃತದೇಹ ಪತ್ತೆಯಾಗಿದೆ. ಆರೋಪಿ ಸಚಿನ್ ಇದೀಗ ಪೊಲೀಸ್ ವಶದಲ್ಲಿದ್ದು, ಪ್ರಕರಣದ ತನಿಖೆ ಮುಂದುವರೆಯುತ್ತಿದೆ.