
ವಿಜಯಪುರ: ಭೀಮಾ ತೀರದ ಹೆಸರಾಂತ ರೌಡಿಶೀಟರ್ ಬಾಗಪ್ಪ ಹರಿಜನ ಮಂಗಳವಾರ ರಾತ್ರಿ ಭೀಕರವಾಗಿ ಹತ್ಯೆಯಾಗಿದ್ದಾರೆ. ವಿಜಯಪುರದ ರೇಡಿಯೋ ಕೇಂದ್ರದ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಈತನ ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಕೊಚ್ಚಿ, ಕೈ ಕತ್ತರಿಸಿ ಹತ್ಯೆ ಮಾಡಿದ್ದಾರೆ.
ಸಿಂದಗಿ ಬ್ಯಾಡಗಿಹಾಳ ಗ್ರಾಮದ ಬಾಗಪ್ಪ, ಭೀಮಾ ತೀರದ ಅಪರಾಧ ಚರಿತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಮಂಗಳವಾರ ರಾತ್ರಿ ಯಾರೋ ಕರೆ ಮಾಡಿದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದಾಗ, 7-8 ಮಂದಿಯ ತಂಡ ಈತನ ಮೇಲೆ ಪ್ರಾಣಘಾತಕ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಹತ್ಯೆಯ ಸುದ್ದಿ ಭೀಮಾ ತೀರದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪ ಹರಿಜನ ಮೇಲೆ 2017ರಲ್ಲಿ ವಿಜಯಪುರ ಜಿಲ್ಲಾ ಕೋರ್ಟ್ ಆವರಣದಲ್ಲಿ ಫೈರಿಂಗ್ ನಡೆದಿತ್ತು. ಆದರೆ ಅದರಿಂದ ಪಾರಾಗಿದ್ದ ಈತ, ಮಾವ ಚಂದಪ್ಪ ಹರಿಜನನ ಮಾರ್ಗದರ್ಶನದಲ್ಲಿ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದನು ಹಾಗೂ ಶಾರ್ಪ್ ಶೂಟರ್ ಎಂದೇ ಹೆಸರುವಾಸಿಯಾಗಿದ್ದ.