
ಬೆಂಗಳೂರು: ರಾಜಧಾನಿಯ ರಾಮಮೂರ್ತಿನಗರದಲ್ಲಿ ನಡೆದ ಭೀಕರ ಅಗ್ನಿ ಅವಘಡದಲ್ಲಿ ಮಂಗಳೂರು ಮೂಲದ ಯುವ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ದಾರುಣವಾಗಿ ಅಂತ್ಯಕಂಡಿದ್ದಾರೆ. ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ 34 ವರ್ಷದ ಶರ್ಮಿಳಾ, ಶನಿವಾರ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಿಂದ ಉಂಟಾದ ದಟ್ಟ ಹೊಗೆಯ ನಡುವೆ ಸಿಲುಕಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾವೂರು ಮೂಲದ ಶರ್ಮಿಳಾ, ನಗರದ ಬೆಳ್ಳಂದೂರಿನ ಪ್ರಖ್ಯಾತ ಅಕ್ಸೆಂಚರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಕಳೆದ 1 ವರ್ಷದಿಂದ ಗೆಳತಿಯೊಬ್ಬರ ಜೊತೆ ಈ ಫ್ಲಾಟ್‌ನಲ್ಲಿ ಬಾಡಿಗೆಗೆ ವಾಸವಿದ್ದ ಅವರು, ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಒಬ್ಬರೇ ಇದ್ದರು. ಅವರ ರೂಮ್ ಮೇಟ್ ಊರಿಗೆ ತೆರಳಿದ್ದ ಕಾರಣ ಒಂಟಿಯಾಗಿದ್ದ ಶರ್ಮಿಳಾ ಅವರಿಗೆ ಆಪತ್ತಿನ ಸಮಯದಲ್ಲಿ ನೆರವು ಸಿಗಲಿಲ್ಲ. ರಾತ್ರಿ 10:30 ರಿಂದ 11:00 ಗಂಟೆಯ ಅವಧಿಯಲ್ಲಿ ಮನೆಯ ಒಂದು ಕೊಠಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಯನ್ನು ವ್ಯಾಪಿಸಿದ್ದು, ಗಾಳಿಯಿಲ್ಲದೆ ಕಾರ್ಬನ್ ಮಾನಾಕ್ಸೈಡ್ ತುಂಬಿದ ದಟ್ಟ ಹೊಗೆ ಇಡೀ ಅಪಾರ್ಟ್‌ಮೆಂಟ್ ಆವರಿಸಿದೆ.
ಹೊಗೆಯಿಂದ ಪಾರಾಗಲು ಶರ್ಮಿಳಾ ಹೊರಬರಲು ಪ್ರಯತ್ನಿಸಿದರಾದರೂ, ತೀವ್ರ ಶಾಖದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು ಮನೆಯಲ್ಲಿ ಕತ್ತಲೆ ಆವರಿಸಿತ್ತು. ಇದರಿಂದಾಗಿ ಬಾಗಿಲು ಮತ್ತು ಕಿಟಕಿಗಳನ್ನು ಪತ್ತೆಹಚ್ಚಲು ಸಾಧ್ಯವಾಗದೆ ಅವರು ಮನೆಯೊಳಗೇ ಸಿಲುಕಿಕೊಂಡಿದ್ದಾರೆ. ಕಿಚನ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್ ಅಥವಾ ಬೆಡ್ ಲ್ಯಾಂಪ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ವಿಧಿವಿಜ್ಞಾನ ತಂಡ (FSL) ಹೆಚ್ಚಿನ ತನಿಖೆ ನಡೆಸುತ್ತಿದೆ.



































