
ಬೆಂಗಳೂರು: ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣುಶಿಶುಗಳಿಗೆ ವಿಶೇಷ ಉಡುಗೊರೆ ನೀಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಈ ಉಡುಗೊರೆಯ ಭಾಗವಾಗಿ, 1000 ರೂ. ಮೌಲ್ಯದ ಮಕ್ಕಳ ಕಿಟ್‌ಗಳನ್ನು ನೀಡಲು ಆರೋಗ್ಯ ಇಲಾಖೆಯು ಕ್ರಮ ಕೈಗೊಂಡಿದೆ.
ಆರೋಗ್ಯ ಇಲಾಖೆ ಜನವರಿ 23 ಮತ್ತು 24ರಂದು ರಾಜ್ಯಾದ್ಯಂತ ಹೆಣ್ಣುಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದು, ಹೆಣ್ಣುಮಕ್ಕಳ ಲಿಂಗಾನುಪಾತವನ್ನು ಸುಧಾರಿಸುವ ಜೊತೆಗೆ ಹೆಣ್ಣುಭ್ರೂಣ ಹತ್ಯೆಯನ್ನು ತಡೆಗಟ್ಟಲು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಮಾತನಾಡಿ, ಹೆಣ್ಣುಮಕ್ಕಳ ಮೇಲೆ ಇರುವ ಅಸಮಾನತೆಯನ್ನು ನಿವಾರಿಸಿ, ಲಿಂಗ ಸಮಾನತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಹೆಣ್ಣುಮಕ್ಕಳನ್ನು ಗೌರವದಿಂದ ನೋಡಬೇಕು ಮತ್ತು ಹೆಣ್ಣುಭ್ರೂಣ ಹತ್ಯೆಯನ್ನು ತಡೆಯಲು ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಹೆಣ್ಣುಮಕ್ಕಳ ದಿನಾಚರಣೆಯ ಅಂಗವಾಗಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಲಾಬಿ ಬಣ್ಣದ ಅಲಂಕಾರ ಮಾಡಲಾಗಿದ್ದು, ಹೆಣ್ಣುಮಕ್ಕಳ ಮಹತ್ವವನ್ನು ಸಾರುವ ಪ್ರಯತ್ನ ನಡೆಯುತ್ತಿದೆ.