
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೆ 6 ದಿನ ಮೊಟ್ಟೆ ವಿತರಿಸುವ ಬದಲು ಕೇವಲ 3 ದಿನ ಮಾತ್ರ ನೀಡಲಾಗುತ್ತಿದೆ ಎಂಬ ಅಜೀಂ ಪ್ರೇಮ್‌ಜಿ ಫೌಂಡೇಶನ್ ವರದಿಯನ್ನು ಮುಂದಿಟ್ಟುಕೊಂಡು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗವು “ಎಕ್ಸ್” (ಹಿಂದಿನ ಟ್ವಿಟರ್) ಖಾತೆಯಲ್ಲಿ, “ಇನ್ನುಳಿದ ಮೂರು ಮೊಟ್ಟೆ ಯಾರ ಬಾಯಿಗೆ?” ಎಂಬ ನೇರ ಪ್ರಶ್ನೆಯನ್ನು ಮುಂದಿಟ್ಟು ಅಭಿಯಾನ ಆರಂಭಿಸಿದೆ.
ವರದಿಯ ಪ್ರಕಾರ, 568 ಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ ಕೇವಲ 3 ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿದೆ ಎಂಬ ಅಂಶ ಬಯಲಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು, ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೊಟ್ಟೆ ತಿನ್ನುತ್ತಿರುವ ವ್ಯಂಗ್ಯಚಿತ್ರಗಳನ್ನು ಹಂಚಿಕೊಂಡಿದೆ. “ದಾನಿಗಳು ಮಕ್ಕಳಿಗೆ 6 ಮೊಟ್ಟೆ ನೀಡಿದರೆ, ತಲುಪುತ್ತಿರುವುದು ಕೇವಲ 3 ಮೊಟ್ಟೆ. ಉಳಿದ 3 ಮೊಟ್ಟೆಗಳು ಯಾರ ಪಾಲು?” ಎಂದು ಬಿಜೆಪಿ ಪ್ರಶ್ನಿಸಿದೆ.
ಇದಲ್ಲದೆ, ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಶಾಲಾ ಮಕ್ಕಳಿಗೆ ಶೂಗಳನ್ನು ನೀಡಲು ಸಹ ಹಣ ಹೊಂದಿಲ್ಲ ಎಂದು ಬಿಜೆಪಿ ಟೀಕಿಸಿದೆ. “ಶಾಲಾ ಮಕ್ಕಳಿಗೆ ಶೂ ದಾನ ಮಾಡಲು ಬೂಟ್ ಪೇ (Boot Pe) ಸ್ಕ್ಯಾನ್ ಮಾಡಿ” ಎಂದು ವಿಡಂಬನಾತ್ಮಕವಾಗಿ ಹೇಳುವ ಮೂಲಕ ಸರ್ಕಾರದ ಆರ್ಥಿಕ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಆರೋಪಗಳು ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಯೋಜನೆಗಳ ಅನುಷ್ಠಾನ ಮತ್ತು ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.