
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಸಂಜೆಯಿಂದ ತಡರಾತ್ರಿಯವರೆಗೆ ಭಾರೀ ಮಳೆ ಸುರಿದಿದ್ದು, ರಾಜಧಾನಿಯ ಬಹುತೇಕ ಪ್ರದೇಶಗಳು ತತ್ತರಿಸಿವೆ. ಕೆಲವೆಡೆ ಭಾರಿ ಸಂಚಾರ ದಟ್ಟಣೆ ಉಂಟಾದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿ ಒಟ್ಟಾರೆ 2.1 ಸೆಂ.ಮೀ. ಮಳೆಯಾಗಿದೆ.
ರಸ್ತೆಗಳೆಲ್ಲ ನದಿ: ವಾಹನ ಸವಾರರ ಪರದಾಟ
ಸಂಜೆ ವೇಳೆ ಕೆಲವು ತಾಸುಗಳ ಕಾಲ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳು ಜಲಾವೃತಗೊಂಡು ನದಿಯಂತಾಗಿದ್ದವು. ಎಂ.ಜಿ. ರಸ್ತೆ, ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ, ಕೋರಮಂಗಲ, ಮತ್ತು ರೆಸಿಡೆನ್ಸಿ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳು ನೀರಿನಿಂದ ತುಂಬಿಹೋಗಿದ್ದವು. ಗರುಡಾ ಮಾಲ್ ಬಳಿ ರಸ್ತೆಗಳು ನದಿಯಂತೆ ಭಾಸವಾಗತೊಡಗಿದವು.
ಒಂದೆಡೆ ಜಲಾವೃತವಾದ ರಸ್ತೆಗಳು, ಮತ್ತೂಂದೆಡೆ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ತೀವ್ರ ಪರದಾಟ ನಡೆಸಬೇಕಾಯಿತು. ದ್ವಿಚಕ್ರ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಮೇಲ್ಸೇತುವೆಗಳ ಕೆಳಗೆ ನಿಂತರೆ, ಕಾರು ಚಾಲಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಕಷ್ಟಪಟ್ಟರು.
ತಗ್ಗು ಪ್ರದೇಶಗಳಲ್ಲಿ ಅಸ್ತವ್ಯಸ್ತ: ಸುರಂಗ ಮಾರ್ಗಗಳು ಬಂದ್
ತಗ್ಗು ಪ್ರದೇಶಗಳಲಿರುವ ಮನೆಗಳಿಗೆ ನೀರು ನುಗ್ಗಿ, ಅಲ್ಲಿನ ವಸ್ತುಗಳು ಹಾನಿಯಾಗಿವೆ. ಮೆಜೆಸ್ಟಿಕ್ ಬಳಿಯ ಓಕುಳಿಪುರಂ ಸುತ್ತಮುತ್ತ ನೀರು ನಿಂತ ಕಾರಣ ಜನ ಓಡಾಡಲು ಪರದಾಡುವಂತಾಯಿತು.
ಹೆಬ್ಬಾಳದ ಬಿಇಎಲ್ ಸರ್ಕಲ್, ಕೆ.ಆರ್. ರಸ್ತೆ, ವೈಟ್‌ಫೀಲ್ಡ್, ಯಶವಂತಪುರ ಸೇರಿದಂತೆ ನಗರದ ಬಹುತೇಕ ಸುರಂಗ ಮಾರ್ಗದಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಜಕ್ಕೂರಿನಲ್ಲಿ ಅತಿ ಹೆಚ್ಚು ಮಳೆ: ಮುಂದಿನ 2 ದಿನ ಮಳೆ ಸಾಧ್ಯತೆ
ನಗರದಾದ್ಯಂತ ಮಳೆ ಸುರಿದಿದ್ದು, ಜಕ್ಕೂರಿನಲ್ಲಿ ಅತ್ಯಧಿಕ 4.1 ಸೆಂ.ಮೀ. ಮಳೆಯಾಗಿದೆ. ಗೊಟ್ಟಿಗೆರೆ (3.5 ಸೆಂ.ಮೀ.), ಕಾಡುಗೋಡಿ (3.2 ಸೆಂ.ಮೀ.) ಮತ್ತು ಚೌಡೇಶ್ವರಿ (3.1 ಸೆಂ.ಮೀ.) ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಆರಂಭವಾದ ಮಳೆ, ಮುಂದಿನ ಶನಿವಾರ ಮತ್ತು ಭಾನುವಾರ ಸೇರಿದಂತೆ ಇನ್ನೂ 2 ದಿನ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.




































