
ಬೆಂಗಳೂರು: ನಗರದ ವಿವಿಧ ದೇವಾಲಯಗಳು ಹಾಗೂ ಜನಜಂಗುಳಿ ಇರುವ ಜಾತ್ರೆಗಳಲ್ಲಿ ಭಕ್ತರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚುತ್ತಿದ್ದ ಗಾಯತ್ರಿ ಹಾಗೂ ಆಕೆಯ ಪತಿ ಶ್ರೀಕಾಂತ್ ಎಂಬುವವರನ್ನು ಕೆ.ಆರ್. ಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಮ್ಮಸಂದ್ರದ ಸಂಪಿಗೆ ನಗರದ ನಿವಾಸಿಗಳಾದ ಈ ದಂಪತಿಗಳಿಂದ ಸುಮಾರು 60 ಲಕ್ಷ ರು. ಮೌಲ್ಯದ 398 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೇವಸಂದ್ರದ ಮಾರಿಯಮ್ಮ ದೇವಾಲಯದಲ್ಲಿ ಲಕ್ಷ್ಮಮ್ಮ ಎಂಬುವವರ 30 ಗ್ರಾಂ ಚಿನ್ನದ ಸರ ಕಳುವಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್‌ಪೆಕ್ಟರ್ ಬಿ. ರಾಮಮೂರ್ತಿ ಅವರ ತಂಡ, ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದಾಗ ಈ ದಂಪತಿಯ ಬಣ್ಣ ಬಯಲಾಗಿದೆ. ತನಿಖೆಯ ವೇಳೆ ಆರೋಪಿ ಮಹಿಳೆ ನೀಡಿದ ಹೇಳಿಕೆ ಕೇಳಿ ಖುದ್ದು ಪೊಲೀಸರೇ ದಂಗಾಗಿದ್ದಾರೆ. ತನ್ನ ಅಂದವನ್ನು ಕಾಪಾಡಿಕೊಳ್ಳಲು ಹಾಗೂ ಜನರ ದೃಷ್ಟಿಯಲ್ಲಿ ಶ್ರೀಮಂತ ಮಹಿಳೆಯಂತೆ ಕಾಣಿಸಿಕೊಳ್ಳಲು ಈಕೆ ಪ್ರತಿ ತಿಂಗಳು ಬರೋಬ್ಬರಿ 5 ಲಕ್ಷ ರು. ಹಣವನ್ನು ಕೇವಲ ಮೇಕಪ್ ಹಾಗೂ ಸೌಂದರ್ಯವರ್ಧಕಗಳಿಗಾಗಿ ವ್ಯಯಿಸುತ್ತಿದ್ದಳು.
ದುಬಾರಿ ರೇಷ್ಮೆ ಸೀರೆ, ಕಣ್ಣು ಕೋರೈಸುವ ಮೇಕಪ್ ಧರಿಸಿ ದೇವಾಲಯಗಳಿಗೆ ಹೋಗುತ್ತಿದ್ದ ಈಕೆಯನ್ನು ಕಂಡರೆ ಯಾರಿಗೂ ಕಳ್ಳಿಯೆಂಬ ಸಂಶಯ ಬರುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಈಕೆ, ಗುಂಪಿನಲ್ಲಿ ಮಹಿಳೆಯರ ಬಳಿ ಸರಳವಾಗಿ ನುಗ್ಗಿ ಅವರ ಗಮನ ಬೇರೆಡೆ ಸೆಳೆದು ಸರ ಅಪಹರಿಸುತ್ತಿದ್ದಳು. “ನನಗೆ ಸೌಂದರ್ಯದ ಹುಚ್ಚು ಜಾಸ್ತಿ, ಮೇಕಪ್ ಇಲ್ಲದೆ ಇರಲು ಸಾಧ್ಯವಿಲ್ಲ” ಎಂದು ವಿಚಾರಣೆ ವೇಳೆ ಈಕೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಸದ್ಯ ಕಳ್ಳತನದ ಮಾಲನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



































