
ಬೆಂಗಳೂರು : ಬೆಂಗಳೂರು ನಗರದಲ್ಲಿ ಇದೀಗ ಹೊಸ ಮಾದರಿಯ ಮಾದಕ ವಸ್ತು ತಂತ್ರದಿಂದ ಗಾಂಜಾ ಮಾರಾಟ ನಡೆಯುತ್ತಿರುವ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಜೆಲ್ಲಿ ಚಾಕೊಲೇಟ್‌ನಂತೆ ಕಾಣುವ ಈ ನಕಲಿ ಉತ್ಪಾದನೆಗಳಲ್ಲಿ ಗಾಂಜಾ ಮಿಶ್ರಿತ ರಸವನ್ನು ಸೇರಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದ್ದು, ವಿಶೇಷವಾಗಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಟಾರ್ಗೆಟ್ ಆಗಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ. ಜೀವನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಈ ‘ಜೆಲ್ಲಿ ಗಾಂಜಾ’ ಗ್ಯಾಂಗ್‌ನ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮದ್ ಜಾಹೀದ್ ಮತ್ತು ಇಸ್ಮಾಯಿಲ್ ಅದ್ಮಾನ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕಾರ್ಯಾಚರಣೆ ವೇಳೆ ₹3 ಲಕ್ಷ ಮೌಲ್ಯದ 1440 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಚಾಕೊಲೇಟ್ ಜೆಲ್ಲಿ ರೂಪದಲ್ಲಿ ಗಾಂಜಾ ರಸವನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿರುವ ಈ ಗ್ಯಾಂಗ್‌ನ ಪದ್ದತಿ ತೀವ್ರ ಆತಂಕ ಹುಟ್ಟುಹಾಕಿದೆ. ಹೆಬ್ಬಾಳದ ವಿಶ್ವನಾಥ ನಾಗೇನಹಳ್ಳಿಯಲ್ಲಿ ಆರೋಪಿಗಳು ವಾಸವಿದ್ದು, ಮಂಗಳೂರು ಮೂಲದ ವ್ಯಕ್ತಿಯ ಸಹಾಯದಿಂದ ಈ ದಂಧೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ಪ್ರಸ್ತುತ ಪೊಲೀಸರು ಈ ಜೆಲ್ಲಿ ಗಾಂಜಾ ತಯಾರಿಕೆಯಾಗುತ್ತಿದ್ದ ಸ್ಥಳ ಹಾಗೂ ಇತರ ಸಂಪರ್ಕಿತ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.