
ಬೆಂಗಳೂರು: ರಾಜಧಾನಿಯ ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳಾ ಸಿಬ್ಬಂದಿಯ ಖಾಸಗಿತನಕ್ಕೆ ಧಕ್ಕೆ ತಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸಾ ಘಟಕದ ಡ್ರೆಸಿಂಗ್ ಕೊಠಡಿಯಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಜೂನಿಯರ್ ಟೆಕ್ನಿಷಿಯನ್‌ನನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಸದ್ಯ ಕಂಬಿ ಹಿಂದೆ ತಳ್ಳಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸುವೆಂದು ಮೊಹತಾ (23) ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ 1 ವರ್ಷದಿಂದ ನಾಗರಬಾವಿ 2ನೇ ಹಂತದಲ್ಲಿರುವ ಆಸ್ಪತ್ರೆಯಲ್ಲಿ ತಾಂತ್ರಿಕ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು 8:30ರ ವೇಳೆಗೆ ಮಹಿಳಾ ಸಿಬ್ಬಂದಿ ಆಸ್ಪತ್ರೆಯ ಡ್ರೆಸಿಂಗ್ ರೂಮ್‌ಗೆ ಹೋದಾಗ, ಅಲ್ಲಿ ಆರೋಪಿಯು ರಹಸ್ಯವಾಗಿ ಇರಿಸಿದ್ದ ಮೊಬೈಲ್ ಫೋನ್ ಪತ್ತೆಯಾಗಿದೆ.
ಸಹೋದ್ಯೋಗಿಯೊಬ್ಬರು ಮೊಬೈಲ್ ಅನ್ನು ಗಮನಿಸಿ ಪರಿಶೀಲಿಸಿದಾಗ, ಅದರಲ್ಲಿ ವಿಡಿಯೋ ರೆಕಾರ್ಡಿಂಗ್ ಚಾಲ್ತಿಯಲ್ಲಿರುವುದು ತಿಳಿದುಬಂದಿದೆ. ಇದರಿಂದ ಬೆಚ್ಚಿಬಿದ್ದ ಸಿಬ್ಬಂದಿ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತ ಆಸ್ಪತ್ರೆಯ ನಿರ್ದೇಶಕ ಡಾ. ಚೇತನ್ ಅವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿರುವ ದೃಶ್ಯಗಳನ್ನು ಯಾರೊಂದಿಗಾದರೂ ಹಂಚಿಕೊಂಡಿದ್ದಾನೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.



































