
ಬೆಂಗಳೂರು: ಗೌರಿ–ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಹಾಗೂ ಅತಿಯಾದ ಸದ್ದು ಮಾಡುವ ಸೌಂಡ್ ಸಿಸ್ಟಮ್‌ಗಳ ಬಳಕೆಗೆ ವಿಧಿಸಲಾದ ನಿರ್ಬಂಧದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಆದೇಶದ ಮೂಲಕ, ಸಾರ್ವಜನಿಕರ ಆರೋಗ್ಯ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಂಡ ಕ್ರಮವು ಕಾನೂನುಬದ್ಧವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ಉತ್ಸವಗಳಲ್ಲಿ ಡಿಜೆ ಹಾಗೂ ಲೌಡ್‌ಸ್ಪೀಕರ್‌ಗಳ ಬಳಕೆಯನ್ನು ನಿಷೇಧಿಸಿ ಆಗಸ್ಟ್ 14ರಂದು ಬೆಂಗಳೂರು ನಗರ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ, “ಕರ್ನಾಟಕ ಲಘು ಸಂಗೀತ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘ” ಹೈಕೋರ್ಟ್ ಮೊರೆ ಹೋಗಿತ್ತು. ಪೊಲೀಸ್ ಆದೇಶವು ಕಲಾವಿದರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿದೆ ಎಂದು ಸಂಘ ಅರ್ಜಿಯಲ್ಲಿ ವಾದಿಸಿತ್ತು.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ನಿಗದಿತ ಡೆಸಿಬಲ್ ಮಟ್ಟವನ್ನು ಮೀರಿ ಶಬ್ದ ಹೊರಸೂಸುವುದು ಕಾನೂನು ಉಲ್ಲಂಘನೆ ಎಂದು ತಿಳಿಸಿತು. ಅದರಲ್ಲೂ ವಿಶೇಷವಾಗಿ ವಸತಿ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ 55 ಡೆಸಿಬಲ್ ಮತ್ತು ರಾತ್ರಿ ವೇಳೆ 45 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಸೂಸುವಂತಿಲ್ಲ ಎಂದು ನ್ಯಾಯಪೀಠ ಸ್ಮರಿಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಧ್ವನಿವರ್ಧಕಗಳ ತಯಾರಿಕೆ ಮತ್ತು ಮಾರಾಟಕ್ಕೆ ಸರ್ಕಾರ ಅವಕಾಶ ನೀಡುತ್ತದೆ. ಆದರೆ ಅವುಗಳ ಬಳಕೆಯನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಸಂಪೂರ್ಣವಾಗಿ ನಿಷೇಧಿಸುವುದು ಕಲಾವಿದರ ಉದ್ಯಮ ಮತ್ತು ಜೀವನೋಪಾಯಕ್ಕೆ ಗಂಭೀರ ಸಮಸ್ಯೆ ಉಂಟುಮಾಡುತ್ತದೆ. ಇದು ಸಂವಿಧಾನದ 19(1)(ಜಿ) ಕಲಂ ಅಡಿಯಲ್ಲಿ ಭದ್ರಪಡಿಸಿದ ಉದ್ಯಮ ನಡೆಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.
ಆದರೆ, ನ್ಯಾಯಾಲಯವು ಈ ವಾದವನ್ನು ತಳ್ಳಿ ಹಾಕಿತು. ಸಾರ್ವಜನಿಕರ ಆರೋಗ್ಯ ಮತ್ತು ನೆಮ್ಮದಿಯನ್ನು ಕಾಪಾಡುವುದು ಆದ್ಯತೆಯಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಪೊಲೀಸರು ಹೊರಡಿಸಿದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ. ಈ ತೀರ್ಪು ಶಬ್ದ ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ಕ್ರಮಗಳಿಗೆ ನ್ಯಾಯಿಕ ಬೆಂಬಲ ನೀಡಿದೆ.