
ಬೆಂಗಳೂರು : ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತಿದೆ. ಆದರೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಜನರಲ್ ಸರ್ಜನ್ ಒಬ್ಬರು ತಮ್ಮ ಪತ್ನಿ ಪಾಲಿಗೆ ಯಮನಾಗಿರುವುದು ಆಘಾತಕಾರಿ. ವೈದ್ಯೆಯಾಗಿದ್ದ ಪತ್ನಿಗೆ ಇಂಜೆಕ್ಷನ್ ನೀಡಿ ಹತ್ಯೆಗೈದಿದ್ದ ಆರೋಪಿ ಡಾಕ್ಟರ್ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕೊಲೆ ನಡೆದು ಸುಮಾರು 6 ತಿಂಗಳ ನಂತರ ಅಸಲಿ ಸತ್ಯ ಹೊರಬಂದಿದ್ದು, ಆರೋಪಿ ಡಾ. ಮಹೇಂದ್ರರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಕಾರಣವೇನು?
2024ರ ಮೇ 26ರಂದು ಡಾ. ಮಹೇಂದ್ರರೆಡ್ಡಿ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ. ಕೃತಿಕಾರೆಡ್ಡಿ ಅವರ ವಿವಾಹ ನಡೆದಿತ್ತು. ಡಾ. ಕೃತಿಕಾರೆಡ್ಡಿ ಅವರು ಅಜೀರ್ಣ, ಗ್ಯಾಸ್ಟ್ರಿಕ್, ಲೋ-ಶುಗರ್‌ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ವಿಷಯವನ್ನು ಕೃತಿಕಾ ಕುಟುಂಬಸ್ಥರು ಮುಚ್ಚಿಟ್ಟು ಡಾ. ಮಹೇಂದ್ರರೆಡ್ಡಿಯವರಿಗೆ ಮದುವೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ.
ಆರೋಗ್ಯ ಸಮಸ್ಯೆ ತಿಳಿದ ಬಳಿಕ ಪ್ರತಿದಿನ ವಾಂತಿ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲ್ಲಲು ಮಹೇಂದ್ರರೆಡ್ಡಿ ಪ್ಲಾನ್ ಮಾಡಿದ್ದ. ಹುಷಾರಿಲ್ಲದೆ ತವರುಮನೆಯಲ್ಲಿ ಮಲಗಿದ್ದ ಡಾ. ಕೃತಿಕಾ ರೆಡ್ಡಿ ಬಳಿ ಹೋಗಿದ್ದ ಆರೋಪಿ, ಐವಿ ಇಂಜೆಕ್ಷನ್ ಮೂಲಕ ಎರಡು ದಿನಗಳ ಕಾಲ ಔಷಧ ನೀಡಿದ್ದ. ಬಳಿಕ ಕೃತಿಕಾ ಜ್ಞಾನ ತಪ್ಪಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದರು.
ಎಫ್‌ಎಸ್‌ಎಲ್ ವರದಿಯಿಂದ ರಹಸ್ಯ ಬಯಲು
ಘಟನೆ ಬಗ್ಗೆ ಆಸ್ಪತ್ರೆಯಿಂದ ಡೆತ್ ಮೆಮೊ ಬಂದ ಬೆನ್ನಲ್ಲೇ ಮಾರತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಕುಟುಂಬಸ್ಥರ ದೂರಿನ ಮೇರೆಗೆ ಯುಡಿಆರ್ (ಅಸ್ವಾಭಾವಿಕ ಸಾವು) ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೃತ ದೇಹದ ಸ್ಯಾಂಪಲ್ ತೆಗೆದು ಎಫ್‌ಎಸ್‌ಎಲ್ (FSL) ಗೆ ಕಳುಹಿಸಿದ್ದರು.
ಈಗ ಎಫ್‌ಎಸ್‌ಎಲ್ ವರದಿ ಕೈಸೇರಿದ್ದು, ಡಾ. ಕೃತಿಕಾ ಸಾವಿಗೆ ದೇಹದಲ್ಲಿ ಕಂಡುಬಂದಿರುವ ಅನಸ್ತೇಶಿಯಾ (ಅರಿವಳಿಕೆ) ಅಂಶವೇ ಕಾರಣ ಎಂದು ಉಲ್ಲೇಖಿಸಲಾಗಿದೆ. ಈ ವರದಿ ಆಧರಿಸಿ ಪೊಲೀಸರು ಯುಡಿಆರ್ ಪ್ರಕರಣವನ್ನು ಕೊಲೆ ಕೇಸ್ ಆಗಿ ಪರಿವರ್ತಿಸಿ ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.