
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ 7 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರುವ ಸಂದರ್ಭದಲ್ಲಿ, ಹಿರಿಯ ನಟಿ ರಮ್ಯಾ ಅವರು ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ದರ್ಶನ್ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಂಡಿದ್ದಾರೆ,” ಎಂದು ರಮ್ಯಾ ವಿಷಾದ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರ ಆರಂಭಿಕ ದಿನಗಳನ್ನು ನೆನಪಿಸಿಕೊಂಡು ಅವರು ಬೆಳೆದ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದರ್ಶನ್ ಬಂಧನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, “ದರ್ಶನ್ ಮತ್ತು ನಾನು ಪರಸ್ಪರ ಪರಿಚಿತರು. ಅವರು ಚಿತ್ರರಂಗಕ್ಕೆ ಬಂದಾಗ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ತಮ್ಮ ಶ್ರಮ ಮತ್ತು ಪ್ರತಿಭೆಯಿಂದ ದೊಡ್ಡ ನಟನಾಗಿ ಬೆಳೆದರು. ಅವರ ಈ ಬೆಳವಣಿಗೆಯನ್ನು ನೋಡಿ ನನಗೆ ತುಂಬಾ ಹೆಮ್ಮೆಯಾಗಿತ್ತು. ಆದರೆ ಇಂದು ಅವರು ಈ ಸ್ಥಿತಿಯಲ್ಲಿ ಇರುವುದನ್ನು ನೋಡಿ ಅವರ ಬದುಕನ್ನು ಅವರೇ ಹಾಳು ಮಾಡಿಕೊಂಡರು ಎಂದು ಅನ್ನಿಸಿತು,” ಎಂದು ಹೇಳಿದರು.
ಈ ಹಿಂದೆ ರಮ್ಯಾ, ದರ್ಶನ್ ಪ್ರಕರಣದ ಬಗ್ಗೆ “ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂಬ ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ದರ್ಶನ್ ಅಭಿಮಾನಿಗಳು ಅವರ ವಿರುದ್ಧ ಮಾಡಿದ ಅಶ್ಲೀಲ ಕಮೆಂಟ್‌ಗಳ ಬಗ್ಗೆಯೂ ಅವರು ಮಾತನಾಡಿದರು. “ಈ ಘಟನೆಯ ನಂತರ ಸೋಷಿಯಲ್ ಮೀಡಿಯಾದ ಕಮೆಂಟ್ ಸೆಕ್ಷನ್‌ಗಳಲ್ಲಿನ ಪರಿಸ್ಥಿತಿ ಸುಧಾರಿಸಿದೆ. ಹಿಂದೆಲ್ಲಾ ಕೆಟ್ಟ ಕಮೆಂಟ್‌ಗಳು ತುಂಬಿ ಹೋಗಿದ್ದವು, ಆದರೆ ಈಗ ಅಂತಹ ಕಮೆಂಟ್‌ಗಳು ಹೆಚ್ಚಾಗಿಲ್ಲ. ಮಹಿಳೆಯರಿಗೆ ಇದರಿಂದ ಧೈರ್ಯ ಬಂದಿದೆ,” ಎಂದು ಅವರು ತಿಳಿಸಿದರು. ಈ ಸಂಬಂಧ ರಮ್ಯಾ ನೀಡಿದ್ದ ದೂರಿನ ಮೇರೆಗೆ ಈಗಾಗಲೇ 7 ಜನರನ್ನು ಬಂಧಿಸಲಾಗಿದೆ.
ಸಿನಿಮಾ ಉದ್ಯಮಕ್ಕೆ ಆಗಿರುವ ನಷ್ಟದ ಬಗ್ಗೆ ಕೇಳಲಾದ ಪ್ರಶ್ನೆಗೆ ರಮ್ಯಾ, “‘ಸೋ ಫ್ರಮ್ ಸೋ’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದರು. “ದೊಡ್ಡ ಹೀರೋ ಅಥವಾ ದೊಡ್ಡ ಬಜೆಟ್ ಇಲ್ಲದೆ ಕೂಡ ಸಿನಿಮಾ ಹಿಟ್ ಆಗಬಹುದು. ಕಥೆ ಚೆನ್ನಾಗಿದ್ದರೆ ಮತ್ತು ಕುಟುಂಬದವರು ಬಂದು ಸಿನಿಮಾ ನೋಡಿದರೆ ಅದು ಯಶಸ್ವಿಯಾಗುತ್ತದೆ. ದೊಡ್ಡ ಸ್ಟಾರ್‌ಗಳು ಇದ್ದರೆ ಮಾತ್ರ ಸಿನಿಮಾ ಹಿಟ್ ಆಗುತ್ತದೆ ಎಂಬುದು ಸುಳ್ಳು ಎಂದು ನಾನು ನಂಬುತ್ತೇನೆ,” ಎಂದು ಅವರು ಅಭಿಪ್ರಾಯಪಟ್ಟರು.