
ಬೆಳ್ತಂಗಡಿ : ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಮೂರು ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಗುರುವಾಯನಕೆರೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ.
ಕಾರು ಅಪಘಾತಗೊಂಡು ಚಾಲಕನ ಸೆರೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಚಾರ್ಮಾಡಿ ಮೂಲಕ ಮಂಗಳೂರು ಕಡೆಗೆ ಅತಿ ವೇಗವಾಗಿ ಸಾಗುತ್ತಿದ್ದ ಇನ್ನೋವಾ ಕಾರು ಗುರುವಾಯನಕೆರೆ ಬಳಿ ಆಟೋರಿಕ್ಷಾ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ, ಆರೋಪಿಗಳು ಆದೇಶವನ್ನು ನಿರ್ಲಕ್ಷಿಸಿ ಪರಾರಿಯಾಗಲು ಪ್ರಯತ್ನಿಸಿದರು.
ಓರ್ವನ ಬಂಧನ, ಇಬ್ಬರು ಪರಾರಿ
ಘಟನೆಯ ನಂತರ ಮೂವರಲ್ಲಿ ಓರ್ವ ಚಾಲಕನನ್ನು ಬಂಧಿಸಲಾಗಿದ್ದು, ಆತನನ್ನು ಮೂಡಬಿದಿರೆಯ ಸುವರ್ಣ ನಗರದ ಆರಿಫ್ (26) ಎಂದು ಗುರುತಿಸಲಾಗಿದೆ. ಆದರೆ, ಆತನೊಂದಿಗೆ ಇದ್ದ ರಿಜ್ವಾನ್ (30) ಮತ್ತು ಸಾಯಿಲ್ (22) ಎಂಬ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಗಾಯಗೊಂಡಿದ್ದ ಒಂದು ದನಕ್ಕೆ ಸ್ಥಳೀಯರು ಚಿಕಿತ್ಸೆ ನೀಡಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.