
ಬೆಳಗಾವಿ: ಹಣದ ದುರಾಸೆ ಹಾಗೂ ಸೇಡಿನ ಕಿಚ್ಚಿನಿಂದ ಮಹಿಳಾ ಅಧಿಕಾರಿಯ ಖಾಸಗಿ ಜೀವನಕ್ಕೆ ಕಿರಿದುಗನ್ನಡಿ ಇಟ್ಟಿದ್ದ ಪ್ರಕರಣದಲ್ಲಿ ಭಾರಿ ತಿರುವು ಸಿಕ್ಕಿದ್ದು, ನಾಲ್ಕನೇ ಆರೋಪಿಯಾಗಿ ಸರ್ಕಾರಿ ಅಧಿಕಾರಿ ವಿನೋದ್ ಟಿ ಎಂಬಾತನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ವರ್ಗಾವಣೆ ದ್ವೇಷದಿಂದ ಮಹಿಳಾ ಅಧಿಕಾರಿಯ ಮನೆಯಲ್ಲೇ ಗುಪ್ತ ಕ್ಯಾಮರಾಗಳನ್ನು ಅಳವಡಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಘಟನೆಯ ಹಿನ್ನೆಲೆಯು ಸಿನಿಮೀಯ ಮಾದರಿಯಲ್ಲಿದ್ದು, ಆರೋಪಿ ವಿನೋದ್ ಟಿ ತಾನು ಕೆಲಸ ಮಾಡುತ್ತಿದ್ದ ಕಚೇರಿಯ ಮಹಿಳಾ ಅಧಿಕಾರಿಯಿಂದ ವರ್ಗಾವಣೆಗೊಂಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಸಂಚು ರೂಪಿಸಿದ್ದನು. ಮಹಿಳಾ ಅಧಿಕಾರಿಯ ಮನೆಯ ಬಲ್ಬ್ ಹೋಲ್ಡರ್‌ಗಳಲ್ಲಿ ಬರೋಬ್ಬರಿ 8 ರಹಸ್ಯ ಕ್ಯಾಮರಾಗಳನ್ನು ಅಳವಡಿಸಿ ಅವರ ಖಾಸಗಿ ಕ್ಷಣಗಳನ್ನು ಸೆರೆಹಿಡಿಯಲಾಗಿತ್ತು. ಈ ದೃಶ್ಯಗಳನ್ನು ಇಟ್ಟುಕೊಂಡು ನಕಲಿ ಪತ್ರಕರ್ತರನ್ನು ಬಳಸಿಕೊಂಡು ಬೃಹತ್ ಮೊತ್ತದ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವ ಯತ್ನ ನಡೆದಿತ್ತು. ಈ ಅಕ್ರಮ ದಂಧೆಯಲ್ಲಿ ಬಂದ ಹಣವನ್ನು ವಿನೋದ್ ಮತ್ತು ನಕಲಿ ಪತ್ರಕರ್ತರು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರು, ಇಂದು ಮುಖ್ಯ ಸಂಚುಕೋರ ಎನ್ನಲಾದ ವಿನೋದ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇದೇ ಪ್ರಕರಣದ ತನಿಖೆಯನ್ನು ವಿಸ್ತರಿಸಿರುವ ಪೊಲೀಸರು, ಮಹಿಳಾ ಅಧಿಕಾರಿಯ ಕಚೇರಿಯಲ್ಲಿದ್ದ ಮತ್ತೊಬ್ಬ ಅಧಿಕಾರಿಯನ್ನೂ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಬಂಧಿತ ವಿನೋದ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



































