
ಬೆಂಗಳೂರಿನಲ್ಲಿ 2024 ರ ಫೆಬ್ರವರಿ, ಜುಲೈ ಹಾಗೂ 2025 ರ ಮಾರ್ಚ್ ಮತ್ತು ಆಗಸ್ಟ್ ಅವಧಿಯಲ್ಲಿ ನಡೆದ ಅಧಿವೇಶನಗಳ ಸಂದರ್ಭದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಉಚಿತ ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವರಿಗೆ ಪತ್ರ ಬರೆದಿರುವ ಅವರು, ನಿಯಮಾವಳಿಗಳಲ್ಲಿ ಅವಕಾಶವಿಲ್ಲದಿದ್ದರೂ 95,83,395 ರೂ.ಗಳನ್ನು ಹೋಟೆಲ್‌ಗಳಿಗೆ ಪಾವತಿಸಿರುವುದು ಅಕ್ಷಮ್ಯ ಎಂದು ದೂರಿದ್ದಾರೆ.
ವಿಧಾನಸಭೆ ಸಚಿವಾಲಯದ ಮಾಹಿತಿ ಪ್ರಕಾರ, ಅಧಿವೇಶನದ ಸಮಯದಲ್ಲಿ ಸದಸ್ಯರಿಗೆ ಸರ್ಕಾರದಿಂದ ಉಚಿತ ಊಟ ನೀಡಲು ಯಾವುದೇ ಅಧಿಕೃತ ಅವಕಾಶವಿಲ್ಲ. ಹೀಗಿದ್ದರೂ, ಒಂದು ಹೊತ್ತಿನ ಊಟಕ್ಕೆ 650 ರೂ., ಉಪಹಾರಕ್ಕೆ 325 ರೂ., ಲಘು ಉಪಹಾರಕ್ಕೆ 200 ರೂ. ಹಾಗೂ ಒಂದು ಕಪ್ ಕಾಫಿಗೆ 50 ರೂ.ಗಳಂತೆ ಸಾರ್ವಜನಿಕ ಹಣವನ್ನು ನೀರಿನಂತೆ ಖರ್ಚು ಮಾಡಲಾಗಿದೆ. ದಿನಭತ್ಯೆ ಪಡೆಯುವ ಶಾಸಕರಿಗೆ ಈ ಸೌಲಭ್ಯ ನೀಡಿರುವುದು ಕಾನೂನು ಬಾಹಿರವಾಗಿದ್ದು, ಈ ಹಣವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಗಡಾದ ಎಚ್ಚರಿಸಿದ್ದಾರೆ. ಈ ಕುರಿತು ಈಗಾಗಲೇ ಧಾರವಾಡ ಹೈಕೋರ್ಟ್ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.



































