
ಸುಳ್ಯ: ಈ ಬಾರಿಯ ಬಿಸಿಲು ಕೇವಲ ಮನುಷ್ಯರಿಗೂ ಅಲ್ಲ, ಜೇನು ನೊಣಗಳಿಗೂ ಸಂಕಷ್ಟ ತಂದಿದೆ. ತಾಪಮಾನ ಹೆಚ್ಚಳದ ಪರಿಣಾಮದ ತೀವ್ರತೆ ಈಗ ಕರಾವಳಿ ಹಾಗೂ ಮಲೆನಾಡು ಭಾಗಗಳ ಜೇನು ಕೃಷಿಗೂ ತಟ್ಟಿದೆ. ಜೇನು ನೊಣಗಳು ಹಾರಲು ಅಸಾಧ್ಯವಾಗುತ್ತಿರುವುದರಿಂದ, ಇಳುವರಿ ಶೇ. 50ರಷ್ಟು ಇಳಿಯುವ ಭೀತಿ ಎದುರಾಗಿದೆ.
ಜೇನು ನೊಣಗಳಿಗೆ ಸಮತೋಲಿತ ಹವಾಮಾನ ಅಗತ್ಯ. ಆದರೆ ಇತ್ತೀಚಿನ ಉಷ್ಣತೆಗೆ ಜೇನು ನೊಣಗಳು ಸಾಯುತ್ತಿವೆ, ಪೆಟ್ಟಿಗೆಯಲ್ಲೂ ಇರಲಾಗುತ್ತಿಲ್ಲ. ಮಕರಂದ ಕೂಡ ಬೇಗ ಕರಗಿ ಹೋಗುತ್ತಿರುವುದರಿಂದ ನೊಣಗಳಿಗೆ ಸಂಗ್ರಹಿಸಲು ಏನೂ ಸಿಗುತ್ತಿಲ್ಲ.
2023-24ರ ತೋಟಗಾರಿಕೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,683 ಜೇನು ಕೃಷಿಕರು 22,289 ಪೆಟ್ಟಿಗೆಗಳಲ್ಲಿ ಜೇನು ಉತ್ಪಾದಿಸುತ್ತಿದ್ದರು. ಆ ವರ್ಷದಲ್ಲಿ 1,22,523 ಕೆ.ಜಿ. ಜೇನು ಉತ್ಪತ್ತಿಯಾದರೆ, ಈ ವರ್ಷ ಅರ್ಧದಷ್ಟು ಸಹ ಉಂಟಾಗಿಲ್ಲ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ದ.ಕ. ಮತ್ತು ಉಡುಪಿಯ ಜೇನು ಸೊಸೈಟಿಗಳಲ್ಲಿ ಒಟ್ಟು 3,200 ಸದಸ್ಯರಿದ್ದು, ಕೇವಲ ಶೇ.10-20 ಮಂದಿ ಮಾತ್ರ ಸೊಸೈಟಿಗೆ ಮಾರಾಟ ಮಾಡುತ್ತಿದ್ದಾರೆ. ಇಳುವರಿ ಕುಸಿತ ಹಾಗೂ ಕಡಿಮೆ ಖರೀದಿ ದರದಿಂದ ಜೇನು ಕೃಷಿಕರು ಗಂಭೀರ ಸಂಕಷ್ಟದಲ್ಲಿದ್ದಾರೆ.
ಕೃಷಿಕರು ಸರ್ಕಾರದಿಂದ ಜೀರೋ ಪರ್ಸೆಂಟ್ ಬೆಳೆಸಾಲ, ಗುತ್ತಿಗೆ ಭದ್ರತೆ, ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದಾರೆ.