
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಜೋಗೇಶ್ವರಹಳ್ಳಿ ಗ್ರಾಮದಲ್ಲಿ ಕರಡಿಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಸಿಧು ಎಮ್ಕರ್ (40) ಎಂದು ಗುರುತಿಸಲಾಗಿದೆ. ಗ್ರಾಮದ ಹೊರಭಾಗದ ನದಿಯ ಬಳಿ ಕೆಲಸಕ್ಕೆ ತೆರಳಿದ್ದ ವೇಳೆ ಕರಡಿಯೊಂದು ಏಕಾಏಕಿ ಆತನ ಮೇಲೆ ದಾಳಿ ಮಾಡಿದೆ. ಸಿಧು ಎಮ್ಕರ್ ಬೆಚ್ಚಿಬಿದ್ದು ಕಿರುಚಿದಾಗ, ಆತನ ಕಿರಿಚಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು.ಜನರನ್ನು ನೋಡಿದ ಕರಡಿ ದಾಳಿ ನಡೆಸುವುದನ್ನು ಬಿಟ್ಟು ಕಾಡಿನತ್ತ ಓಡಿದೆ.
ಈ ಘಟನೆಯಲ್ಲಿ ಸಿಧು ಎಮ್ಕರ್ ಕೈ ಮತ್ತು ತೊಡೆ ಭಾಗದಲ್ಲಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ಲಭಿಸಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.