
ಬಂಟ್ವಾಳ: ಕಾರಿನ ಆಟೋ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವನಿಗೆ ಮತ್ತೊಂದು ಕಾರು ವೇಗವಾಗಿ ಢಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟ ಘಟನೆ ಮಂಗಳವಾರ ಬಿ.ಸಿ. ರೋಡಿನ ಗಾಣದಪಡ್ಪುವಿನಲ್ಲಿ ನಡೆದಿದೆ.
ಬೋಳಂತೂರು ನಿವಾಸಿ, 33 ವರ್ಷದ ಜಬ್ಬಾರ್ ಮೃತಪಟ್ಟವರು.
ಅವಿವಾಹಿತನಾಗಿದ್ದ ಜಬ್ಬಾರ್ ಅವರು ಗಾಣದಪಡ್ಪುವಿನ ಶಿವಗಣೇಶ್ ಬ್ಯಾಟರಿ ಅಂಗಡಿಯಲ್ಲಿ ಕಾರ್ಮಿಕನಾಗಿ ಆಟೋ ಇಲೆಕ್ಟ್ರಿಕಲ್ ಕೆಲಸ ನಿರ್ವಹಿಸುತ್ತಿದ್ದರು.
ಘಟನೆ ವಿವರ
ಇಂದು (ಅ. 14) ಜಬ್ಬಾರ್ ಅವರು ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದಾಗ, ಬಂಟ್ವಾಳ ಬೈಪಾಸ್ ಕಡೆಯಿಂದ ಬಂದ ವೇಣೂರು ಮೂಲದ ವ್ಯಕ್ತಿಯೋರ್ವ ಚಲಾಯಿಸುತ್ತಿದ್ದ ಕಾರು ಹಿಂಬದಿಯಿಂದ ಬಂದು ಜೋರಾಗಿ ಢಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಜಬ್ಬಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.