
ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಭರತ್ ಕುಮ್ಡೇಲು (29) ಮಂಗಳೂರಿನ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ನ್ಯಾಯಾಲಯವು ಆರೋಪಿಯನ್ನು 2025ರ ಅಕ್ಟೋಬರ್ 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಳೆದ ಮೇ 27ರಂದು ಅಬ್ದುಲ್ ರೆಹಮಾನ್ ಅವರ ಹತ್ಯೆ ನಡೆದಿತ್ತು. ಈ ಗಂಭೀರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಭರತ್ ರಾಜ್ ಅಲಿಯಾಸ್ ಭರತ್ ಕುಮ್ಡೇಲು ಹತ್ಯೆ ನಡೆದ ದಿನದಿಂದಲೂ ತಲೆಮರೆಸಿಕೊಂಡಿದ್ದನು. ಪೊಲೀಸರು ಈತನ ವಿರುದ್ಧ ‘ಕೋಕಾ’ (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ- KCOCA) ಅಡಿಯಲ್ಲಿಯೂ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ನ್ಯಾಯಾಲಯದಿಂದ ಆರೋಪಿಯ ಬಂಧನಕ್ಕಾಗಿ ವಾರಂಟ್ ಕೂಡ ಜಾರಿಯಾಗಿತ್ತು.
ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ದೀಪಕ್, ಚಿಂತನ್, ಪೃಥ್ವಿರಾಜ್ ಜೋಗಿ, ಸುಮಿತ ಬಿ ಆಚಾರ್ಯ, ವಿ. ರವಿರಾಜ ಮೂಲ್ಯ, ಅಭಿನ್ ರೈ, ತೇಜಾಕ್ಷ, ರವಿಸಂಜಯ್ ಜಿ.ಎಸ್., ಶಿವಪ್ರಸಾದ್ ತುಂಬೆ, ಪ್ರದೀಪ್, ಶಾಹಿತ್ ಸಚಿನ್ ರೊಟ್ಟಿಗುಡ್ಡೆ ಮತ್ತು ರಂಜಿತ್ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಮುಖ ಆರೋಪಿಯೂ ನ್ಯಾಯಾಲಯಕ್ಕೆ ಶರಣಾಗಿರುವುದರಿಂದ ಪ್ರಕರಣದ ತನಿಖೆಗೆ ಮತ್ತಷ್ಟು ಬಲ ಬಂದಂತಾಗಿದೆ. ನ್ಯಾಯಾಲಯದ ಆದೇಶದಂತೆ ಭರತ್ ಕುಮ್ಡೇಲು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾನೆ.



































