
ನವದೆಹಲಿ: ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಎಲ್ಲ ಬ್ಯಾಂಕುಗಳಿಗೆ ಮಹತ್ವದ ನಿರ್ದೇಶನೆ ನೀಡಿದ್ದು, ಯಾವುದೇ ಅಡ್ಡಿಯಿಲ್ಲದೆ ನಗದು ಲಭ್ಯತೆ, ಯುಪಿಐ, ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಅಗತ್ಯ ಬ್ಯಾಂಕಿಂಗ್ ಸೇವೆಗಳಿಗೆ ನಿರಂತರ ಪ್ರವೇಶ ಒದಗಿಸಬೇಕೆಂದು ಹೇಳಿದ್ದಾರೆ.
ಡಿಜಿಟಲ್ ಮತ್ತು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗಳಿಗೆ ಫೈರ್ವಾಲ್ ವ್ಯವಸ್ಥೆ ಕಡ್ಡಾಯಗೊಳಿಸುವ ಜೊತೆಗೆ, ದಿನದ 24 ಗಂಟೆಗಳಿಗೂ ಸೈಬರ್ ಭದ್ರತಾ ಮೇಲ್ವಿಚಾರಣೆ ಇರಬೇಕು ಎಂದು ಅವರು ತಿಳಿಸಿದ್ದಾರೆ. ಸೈಬರ್ ಭದ್ರತೆ ಹಾಗೂ ಡೇಟಾ ಸೆಂಟರ್‌ಗಳ ಲೆಕ್ಕಪರಿಶೋಧನೆ ನಿಯಮಿತವಾಗಿ ನಡೆಯಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಸಭೆಯ ವೇಳೆ, “ಇದು ಆರ್ಥಿಕ ಸ್ಥಿರತೆಗೆ ಬಹುಮುಖ್ಯವಾದ ಸಮಯ. ಬ್ಯಾಂಕುಗಳು ಯಾವುದೇ ಬಿಕ್ಕಟ್ಟನ್ನು ನಿಭಾಯಿಸಲು ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿರಬೇಕು,” ಎಂದು ಸೀತಾರಾಮನ್ ಹೇಳಿದ್ದಾರೆ. ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆ ಇಲ್ಲದಂತೆ ನೋಡಿಕೊಳ್ಳಬೇಕೆಂದು ಅವರು ಒತ್ತಿ ಹೇಳಿದರು.
ಅದೇ ರೀತಿ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಸೂಚನೆ ನೀಡಿದ್ದು, ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.