
ಬೆಂಗಳೂರು: ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಬಾಡಿಗೆ ಮನೆ ನೋಡುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಸಿನಿಮಾಟೋಗ್ರಾಫರ್ ಒಬ್ಬನನ್ನು ಸಲಾಖೆಯ ಹಿಂದೆ ತಳ್ಳಿದ್ದಾರೆ. ಬಂಧಿತ ಆರೋಪಿಯನ್ನು ಕಿರಣ್ ಎಂದು ಗುರುತಿಸಲಾಗಿದ್ದು, ಈತನಿಂದ ಅಂದಾಜು 55 ಲಕ್ಷ ರೂಪಾಯಿ ಮೌಲ್ಯದ 348 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ: ವೈಟ್‌ಫೀಲ್ಡ್‌ನ ನಾಗೊಂಡನಹಳ್ಳಿಯ ನಿವಾಸಿಯಾದ ಜಗದೀಶ್ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ತಮ್ಮ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡಲು ಮುಂದಾಗಿದ್ದರು. ಇದನ್ನು ಗಮನಿಸಿದ ಆರೋಪಿ ಕಿರಣ್, ಫೆಬ್ರವರಿ ತಿಂಗಳ ಆರಂಭದಲ್ಲಿ ಮನೆ ವಿಚಾರಿಸುವ ನೆಪದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿದ ಕಿರಣ್, ಅದೃಷ್ಟವಶಾತ್ ಶೂ ರ್ಯಾಕ್‌ನಲ್ಲಿ ಇರಿಸಲಾಗಿದ್ದ ಮನೆಯ ಅಸಲಿ ಕೀಲಿಕೈಯನ್ನು ಪತ್ತೆ ಹಚ್ಚಿದ್ದ.
ಅವಕಾಶಕ್ಕಾಗಿ ಕಾಯುತ್ತಿದ್ದ ಈತ, ಅದೇ ಕೀಲಿಕೈ ಬಳಸಿ ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ ಬೆಲೆಬಾಳುವ ಒಡವೆಗಳನ್ನು ದೋಚಿ ಪರಾರಿಯಾಗಿದ್ದ. ಸಂಜೆ ಮನೆಗೆ ಬಂದ ಮಾಲೀಕರು ಬೀಗ ಮುರಿಯದಿದ್ದರೂ ಒಡವೆಗಳು ಮಾಯವಾಗಿರುವುದನ್ನು ಕಂಡು ದಿಗಿಲುಗೊಂಡು ಪೊಲೀಸರಿಗೆ ದೂರು ನೀಡಿದ್ದರು.
ದೋಷ ಮುಕ್ತಿಗೆ ಮಾದಪ್ಪನ ಮೊರೆ: ಕಳ್ಳತನ ಮಾಡಿದ ನಂತರ ಸಿಕ್ಕ ಹಣ ಮತ್ತು ಒಡವೆಗಳನ್ನು ಕಂಡು ಕಿರಣ್‌ಗೆ ಒಳಗೊಳಗೆ ಭಯ ಶುರುವಾಗಿತ್ತು ಎನ್ನಲಾಗಿದೆ. ಮಾಡಿದ ತಪ್ಪಿಗೆ ದೋಷ ಮುಕ್ತಿ ಪಡೆಯಲು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ನೇರವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದಿದ್ದ. ಆದರೆ, ವಿಧಿ ಆಟ ಬೇರೆಯೇ ಇತ್ತು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತಾಂತ್ರಿಕವಾಗಿ ವಿಶ್ಲೇಷಿಸಿದ ಪೊಲೀಸರು ಆರೋಪಿಯ ಚಲನವಲನಗಳನ್ನು ನಿರಂತರವಾಗಿ ಗಮನಿಸುತ್ತಿದ್ದರು.
ಪೊಲೀಸ್ ಬಲೆಗೆ ಬಿದ್ದ ಕಿರಣ್: ಮಲೆ ಮಹದೇಶ್ವರ ಬೆಟ್ಟದಿಂದ ಪುಣ್ಯ ಸ್ನಾನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಂತೆಯೇ, ಹೊಂಚು ಹಾಕಿದ್ದ ವೈಟ್‌ಫೀಲ್ಡ್ ಪೊಲೀಸರು ಈತನನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಕೋವಿಡ್ ಸಮಯದಲ್ಲಿ ತನ್ನ ಸ್ಟುಡಿಯೋ ನಷ್ಟಕ್ಕೊಳಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಿರಣ್, ಸುಲಭವಾಗಿ ಹಣ ಮಾಡುವ ಆಸೆಗೆ ಬಿದ್ದು ಈಗ ಜೈಲು ಪಾಲಾಗಿದ್ದಾನೆ



































